ಸಿದ್ದಾಪುರ, ಡಿ. 15: ಮಾಲ್ದಾರೆಯ ನಿರಾಶ್ರಿತ ಗಿರಿಜನರಿಗೆ ಸೂರು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಅರಣ್ಯ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಜಿಲ್ಲಾ ಬಿ.ಜೆ.ಪಿ ಪರಿಶಿಷ್ಟ ಪಂಗಡದ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಅಧ್ಯಕ್ಷ ರಾಜಾರಾವ್ ಎಚ್ಚರಿಸಿದ್ದಾರೆ.
ದೇವಮಚ್ಚಿ ಅರಣ್ಯ ವ್ಯಾಪ್ತಿಯ ದಿಡ್ಡಳ್ಳಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ 577 ಕುಟುಂಬದ ಗುಡಿಸಲು ತೆರವುಗೊಳಿಸಿದ ಬಳಿಕ ಸಮೀಪದ ಆಶ್ರಮ ಶಾಲೆಯ ಮುಂಭಾಗ ಬೀಡುಬಿಟ್ಟಿರುವ ಗಿರಿಜನರನ್ನು ಭೇಟಿ ಮಾಡಿದ ಅವರು, ನಿರಾಶ್ರಿತರಿಗೆ 5 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾಗರಹೊಳೆಯಲ್ಲಿ ಖಾಸಗಿ ರೆಸಾರ್ಟ್ ನಿರ್ಮಿಸಿ ಬಳಿಕ ಹೈಕೋರ್ಟ್ ಆದೇಶದಂತೆ ಅವರಿಗೆ ಪರಿಹಾರ ನೀಡಿದ್ದು ಸರಕಾರಕ್ಕೆ ನಷ್ಟವಲ್ಲವೇ ಎಂದು ಪ್ರಶ್ನಿಸಿದ ಅವರು, ಅದರಂತೆ ಗಿರಿಜನರಿಗೆ ಸೂರು ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಕೊರೆಯುವ ಚಳಿಯಲ್ಲಿ ಹೊದಿಕೆಗಳೂ ಇಲ್ಲದೆ ವಾಸವಾಗಿರುವ ಗಿರಿಜನರ ಸ್ಥಿತಿ ಶೋಚನೀಯವಾಗಿದೆ. ಸಮಾಜ ಕಲ್ಯಾಣ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಕನಿಷ್ಟ ಪ್ಲಾಸ್ಟಿಕ್ ಹೊದಿಕೆಯನ್ನೂ ನೀಡಿಲ್ಲ. ಆದಿವಾಸಿಗಳು ಕೆಲಸವಿಲ್ಲದೇ ಕೈಯಲ್ಲಿ ಹಣ ಇಲ್ಲದೇ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಆದರೇ ಸರಕಾರದ ಅಥವಾ ಅಧಿಕಾರಿಗಳು ಕಣ್ಣಿದ್ದರೂ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಆಹಾರವಿಲ್ಲದೇ ಮಕ್ಕಳು ಮಹಿಳೆಯರು ಪರದಾಡುವದನ್ನು ಕಂಡು ಅಕ್ಕಿ ವಿತರಿಸಿದ್ದೇನೆ ಎಂದರು.
ಈ ಸಂದರ್ಭ ಬಿ.ಜೆ.ಪಿ ವೀರಾಜಪೇಟೆ ತಾಲೂಕು ಪರಿಶಿಷ್ಠ ವರ್ಗದ ಪ್ರ.ಕಾರ್ಯದರ್ಶಿ ಪರಮೇಶ್ವರ, ಲ್ಯಾಂಪ್ ನಿರ್ದೇಶಕ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಇದ್ದರು.