ಮಡಿಕೇರಿ, ಡಿ. 16: ದಿಡ್ಡಳ್ಳಿ ಯಲ್ಲಿ ಗುಡಿಸಲು ನಿರ್ಮಿಸಿ ಕೊಂಡಿರುವ ಗಿರಿಜನರಿಗೆ ಆದಷ್ಟು ಶೀಘ್ರದಲ್ಲಿ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಭರವಸೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಯ ದಿಡ್ಡಳ್ಳಿಯಲ್ಲಿನ ಮೀಸಲು ಅರಣ್ಯದಲ್ಲಿ ಗಿರಿಜನರು ಗುಡಿಸಲು ಹಾಕಿಕೊಂಡಿದ್ದಾರೆ. ಇವರಿಗೆ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದರು. ವಸತಿ ಹಾಗೂ ನಿವೇಶನ ರಹಿತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂಬದು ಜಿಲ್ಲಾಡಳಿತದ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಮೂಲ ನಿವಾಸಿ ಗಿರಿಜನರು ಸಹಕರಿಸಬೇಕು. ಯಾವದೇ ರೀತಿಯ ಒತ್ತಡಕ್ಕೆ ಮಣಿಯ ಬಾರದು. ಜಿಲ್ಲಾಡಳಿತ ಗಿರಿಜನರ ಜೊತೆಗಿದೆ ಎಂದು ಹೇಳಿದರು.
ಗಿರಿಜನರು ವಾಸಮಾಡುವ ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸ ಲಾಗುವದು. ಜೊತೆಗೆ ಗಿರಿಜನರ ಕಲ್ಯಾಣ ಇಲಾಖೆಯಿಂದ ಎಲ್ಲಾ ರೀತಿಯ ಮೂಲಸೌಲಭ್ಯ ಕಲ್ಪಿಸ ಲಾಗುವದು.
ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಅಂತಹ ಕಡೆಗಳಲ್ಲಿ ಪುನರ್ ವಸತಿ ಕಲ್ಪಿಸಲು ಕ್ರಮಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವರ್ಣ ಸೇನ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಸಮುದಾಯ ಹಕ್ಕುಗಳನ್ನು ನೀಡಬಹುದಾಗಿದೆ. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ
(ಮೊದಲ ಪುಟದಿಂದ) ವಸತಿ ನಿರ್ಮಾಣಕ್ಕೆ ಅವಕಾಶವಿಲ್ಲ. ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿ ಕೊಂಡಿರುವ ಗಿರಿಜನರಿಗೆ ಭೂಮಿ ಲಭ್ಯವಿರುವ ಕಡೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಇತರರು ಇದ್ದರು.