ಮಡಿಕೇರಿ, ಡಿ. 14: ಮಾಲ್ದಾರೆ-ದಿಡ್ಡಳ್ಳಿಯಲ್ಲಿ ನೆಲೆ ಕಳೆದುಕೊಂಡಿರುವ ಗಿರಿಜನರಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸೂಕ್ತ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾಲ್ದಾರೆ-ದಿಡ್ಡಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 575 ಕ್ಕೂ ಅಧಿಕ ಗಿರಿಜನರು ಅಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ ಅರಣ್ಯ ಇಲಾಖೆ ಗುಡಿಸಲುಗಳನ್ನು ತೆರವುಗೊಳಿಸಿರುವದರಿಂದ ಗಿರಿಜನರು ನೆಲೆ ಕಳೆದುಕೊಂಡು ಅತಂತ್ರರಾಗಿದ್ದಾರೆ. ಆದ್ದರಿಂದ ಇವರಿಗೆ ಆಶ್ರಯ ಕಲ್ಪಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಆಸ್ತಿ ಮಾಡಿಕೊಂಡಿರುವ ಶ್ರೀಮಂತ ವರ್ಗ ಜಿಲ್ಲೆಯಲ್ಲಿ ಸಾಕಷ್ಟಿದ್ದಾರೆ. ಆದ್ದರಿಂದ ಹತ್ತು ಎಕರೆಗೂ ಹೆಚ್ಚು ಜಾಗ ಹೊಂದಿದ್ದರೆ ಮತ್ತು ಐದು ಎಕರೆಗಿಂತ ಹೆಚ್ಚು ಸರಕಾರಿ ಜಾಗ ಒತ್ತುವರಿಯಾಗಿದ್ದಲ್ಲಿ ಅವುಗಳನ್ನು ಗುರುತಿಸಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಬೇಕೆಂದು ಟಿ.ಪಿ. ರಮೇಶ್ ಒತ್ತಾಯಿಸಿದ್ದಾರೆ.

ಈಗಾಗಲೇ ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ.ಟಿ. ಪ್ರದೀಪ್ ಅವರು ಪಕ್ಷದ ಪದಾಧಿಕಾರಿಗಳೊಂದಿಗೆ ಮಾಲ್ದಾರೆ-ದಿಡ್ಡಳ್ಳಿಗೆ ತೆರಳಿ ಗಿರಿಜನ ಮುಖಂಡರಿಂದ ಅಹವಾಲು ಸ್ವೀಕರಿಸಿದ್ದಾರೆ. ಅಲ್ಲದೆ ಭೂಮಿಯ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್‍ನ ನಿಯೋಗ ಸರಕಾರದ ಬಳಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳು ಗಿರಿಜನರ ನಿವೇಶನದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ವಿವಿಧ ಭಾಷಿಕ ಅಕಾಡೆಮಿಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಮಡಿಕೇರಿಯಲ್ಲಿ ನಡೆದ “ಸಂಗಮ-ಸಂಭ್ರಮ” ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿ.ಪಂ. ಅಧ್ಯಕ್ಷರು ಪಾಲ್ಗೊಳ್ಳದೆ ಇರುವದನ್ನು ಗಮನಿಸಿದರೆ ಶಾಸಕರುಗಳು ಬೇಜವಾಬ್ದಾರಿತನವನ್ನು ಪ್ರದರ್ಶಿಸಿದಂತಾಗಿದೆ ಎಂದು ಟಿ.ಪಿ. ರಮೇಶ್ ಆರೋಪಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶಾಸಕರುಗಳೂ ಪಾಲ್ಗೊಂಡಿದ್ದರೆ ಅದರ ಹಿರಿಮೆಯೇ ಬೇರೆಯಾಗಿರುತ್ತಿತ್ತು. “ಸಂಗಮ-ಸಂಭ್ರಮ” ಕಾರ್ಯಕ್ರಮದ ನಂತರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆದರೆ ತಪ್ಪೇನು ಮತ್ತು ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಸರಕಾರಿ ಕಾರ್ಯಕ್ರಮಗಳೆಲ್ಲವೂ ಸಮಯಕ್ಕೆ ಸರಿಯಾಗಿ ನಡೆಯುತ್ತಿತ್ತೇ ಅಥವಾ ವಿಧಾನಸಭಾಧ್ಯಕ್ಷರು ಹಾಗೂ ಮಂತ್ರಿಗಳು ಕಾರ್ಯಕ್ರಮಕ್ಕೆ ಸರಿಯಾಗಿ ಆಗಮಿಸುತ್ತಿದ್ದರೇ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಅಖಿಲ ಭಾರತ 80 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಾಗಲೂ ಇಬ್ಬರೂ ಶಾಸಕರು ಯಾವದೇ ಸಹಕಾರ ನೀಡಿಲ್ಲ. ಭಾಷೆ, ಸಾಹಿತ್ಯ, ಸಂಸ್ಕøತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ರಾಜಕೀಯದಿಂದ ಹೊರತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗೆ ಬರುವಾಗ ತಡವಾಯಿತ್ತೆಂದು ಹೇಳಿ ಅಭಿವೃದ್ಧಿ ಪರ ಚರ್ಚೆಯ ಸಭೆಗೆ ಗೈರು ಹಾಜರಾಗಿರುವದು ಶಾಸಕರುಗಳಿಗೆ ಶೋಭೆ ತರುವಂತಹ ವಿಚಾರವಲ್ಲವೆಂದು ಟಿ.ಪಿ. ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.