ಮಡಿಕೇರಿ, ಆ. 29: ಗಾಳಿಬೀಡು ಗ್ರಾಮದ ಚಪ್ಪಂಡಕೆರೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಯಿತು. ಗ್ರಾಮಸ್ಥರು ಐನ್‍ಮನೆಯಲ್ಲಿ ಕತ್ತಿ, ಕೋವಿ, ದಿನನಿತ್ಯ ಉಪಯೋಗಿಸುವ ಆಯುಧ ಗಳಿಗೆ ಪೂಜೆ ಸಲ್ಲಿಸಿ, ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬವನ್ನು ಆಚರಿಸಿದರು.

ಈ ಸಂದರ್ಭ ಆಟೋಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಪುಟಾಣಿ ಮಕ್ಕಳು ಹಾಗೂ ನೆಂಟರಿಷ್ಟರು ಭಾಗವಹಿಸಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭ ಕೋಳುಮುಡಿಯನ ಅನಂತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಗಾಳಿಬೀಡು ಗ್ರಾಮ ಪಂಚಾಯಿತಿ ಸದಸ್ಯ ಎಂ.ಡಿ. ಸುಭಾಷ್ ಆಳ್ವ, ಗ್ರಾಮದ ಹಿರಿಯರಾದ ಕೆ.ಜಿ. ಮುತ್ತಣ್ಣ, ಕೆ.ಸಿ. ವೆಂಕಪ್ಪ, ಕೆ.ಜಿ. ಆನಂದ, ಕೆ.ಎಲ್. ಹೇಮಂತ್ ಕುಮಾರ್, ಕೆ.ಜಿ. ರೋಷನ್ ಮತ್ತು ಮುದಿಯಾರು ಗಣೇಶ್ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡೆಯ ಯಶಸ್ಸಿಗೆ ಕಾರಣರಾದರು. ಕ್ರೀಡಾ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಕರಕರನ ವರಿಷ್ಮ ಪ್ರಾರ್ಥಿಸಿದರು. ಕರಕರನ ಮೋಹನ್ ಸ್ವಾಗತಿಸಿದರು. ಕೋಳುಮುಡಿಯನ ಮೋಹನ್ ವಂದಿಸಿದರು.