ಮಡಿಕೇರಿ, ಜು. 16: ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮಡಿಕೇರಿಗೆ ಭೇಟಿ ನೀಡಿ ಭಾಷಣ ಮಾಡಿದ ನೆನಪಿಗಾಗಿ ನಿರ್ಮಿಸಲಾಗಿರುವ ಗಾಂಧಿ ಪ್ರತಿಮೆ ಹಾಗೂ ಎದುರಿಗಿರುವ ಮೈದಾನದ ರಕ್ಷಣೆ ಮಡಿಕೇರಿ ನಗರಸಭೆ ಮುಂದಾಗಿದೆ. ಮೈದಾನದ ಸುತ್ತಲೂ ತಡೆಬೇಲಿ ಹಾಗೂ ಆವರಣಗೋಡೆ ನಿರ್ಮಿಸುವದಲ್ಲದೆ ಪ್ರತಿಮೆ ಎದುರು ಉದ್ಯಾನವನ ನಿರ್ಮಾಣ ಮಾಡಿ ಅಂದ ಹೆಚ್ಚಿಸುವದರೊಂದಿಗೆ ಸ್ಮಾರಕದ ರಕ್ಷಣೆಗೆ ಮುಂದಾಗಿದೆ.
ವಿದ್ಯಾರ್ಥಿಗಳಿಗೆ, ಕ್ರೀಡಾಪಟು ಗಳಿಗೆ ಅಭ್ಯಾಸಕ್ಕೆ, ಕ್ರೀಡಾಕೂಟ ಆಯೋಜನೆಗೆ ಗಾಂಧಿ ಮೈದಾನ ಬಳಕೆ ಮಾಡಿಕೊಳ್ಳುತ್ತಾರೆ. ದಸರಾ ಕಾರ್ಯಕ್ರಮ, ಇನ್ನಿತರ ಸಾರ್ವಜನಿಕ ಸಭೆ ಸಮಾರಂಭಗಳಿಗೂ ಸೂಕ್ತವಾದ ಪ್ರದೇಶವಾಗಿದೆ. ಆದರೆ, ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ರಾಜಾಸೀಟ್‍ಗೆ ಆಗಮಿಸುವ ಪ್ರವಾಸಿಗರ ಭಾರೀ ವಾಹನಗಳು, ಮೈದಾನದಲ್ಲಿ ನಿಲುಗಡೆಗೊಳ್ಳುತ್ತಿದ್ದು, ಮೈದಾನ ಕೆಸರಿನ ಕೊಂಪೆಯಾಗಿ ಪರಿಣಮಿಸಿದೆ. ಈ ಮೈದಾನವನ್ನು ರಕ್ಷಿಸುವಂತೆ ಸಂಘ-ಸಂಸ್ಥೆಗಳು ಹಲವಾರು ಬಾರಿ ಮನವಿ ಮಾಡಿಕೊಡಿದ್ದವು. ಮಾಧ್ಯಮಗಳು ಕೂಡ ದುಸ್ಥಿತಿಗಳ ಬಗ್ಗೆ ಆಗಾಗ್ಗೆ ಬೆಳಕು ಚೆಲ್ಲಿದ್ದವು. ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲೂ ಕೂಡ ಸದಸ್ಯರುಗಳು ಈ ಬಗ್ಗೆ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ನಗರಸಭೆ ತುರ್ತಾಗಿ ಮೈದಾನದ ಒಂದು ಬದಿಯಲ್ಲಿ ತಂತಿ ಬೇಲಿ ನಿರ್ಮಿಸಿ ವಾಹಗಳು ಒಳಪ್ರವೇಶಿಸದಂತೆ ಕ್ರಮಕೈ ಗೊಂಡಿತ್ತು. ಇದೀಗ ಆವರಣ ಗೋಡೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆ ದಾರ ಧರ್ಮರಾಜು ಎಂಬವರು ಇಂದಿನಿಂದ ಆವರಣಗೋಡೆ ನಿರ್ಮಿಸಲು ಮುಂದಾಗಿದ್ದಾರೆ.
ಪುಟ್ಟ ಮೈದಾನ
ಗಾಂಧಿ ಪ್ರತಿಮೆ ಬಳಿಯಿಂದ ಅಡ್ಡಲಾಗಿ ರಸ್ತೆವರೆಗೆ ರೂ. 4 ಲಕ್ಷ ವೆಚ್ಚದಲ್ಲಿ ಆವರಣಗೋಡೆ ಹಾಗೂ ಪ್ರತಿಮೆ ಎದುರು ಪುಟ್ಟ ಉದ್ಯಾನವನ ನಿರ್ಮಾಣವಾಗಲಿದೆ. ಇದರಿಂದಾಗಿ ಸ್ಮಾರಕದ ರಕ್ಷಣೆಯೊಂದಿಗೆ ಹಸುರಿನ ಕಳೆ ಕಟ್ಟಲಿದೆ. ಈಗಾಗಲೇ ರಾಜಾ ಸೀಟ್ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆಯ ಪ್ರವೇಶ ಮಾರ್ಗದವರೆಗೆ ಕಬ್ಬಿಣದ ಸರಳಿನ ತಡೆ ಬೇಲಿ ನಿರ್ಮಿಸಲಾಗಿದೆ. ರೂ. 11.50 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, ಮಧ್ಯದಲ್ಲಿ ಮೈದಾನ ಪ್ರವೇಶಿಸಲು ಗೇಟ್‍ಗಳನ್ನು ಅಳವಡಿಸ ಲಾಗುತ್ತಿದೆ. ‘ಗಾಂಧಿ ಮೈದಾನವನ್ನು ರಕ್ಷಿಸಿ’ ಎಂಬ ಸಹೃದಯ ಕೂಗಿಗೆ ಸ್ಪಂದನ ದೊರೆತಂತಾಗಿದೆ.
-ಸಂತೋಷ್.