ಮಡಿಕೇರಿ, ನ.4 :ಮಂಜಿನ ನಗರಿಯೆಂದೇ ಖ್ಯಾತಿವೆತ್ತಿರುವ ಮಡಿಕೇರಿಯ ಪ್ರಮುಖ ವೀಕ್ಷಣಾ ಸ್ಥಳಗಳಲ್ಲೊಂದಾಗಿರುವ ಗಾಂಧಿ ಪ್ರತಿಮೆ ಎದುರು ವಸ್ತು ಪ್ರದರ್ಶನ ಮಾರಾಟ ಮಳಿಗೆಗೆ ಅಳವಡಿಸಲಾಗಿರುವ ಪೆಂಡಾಲ್‍ನ ಕಬ್ಬಿಣದ ರಾಡ್‍ಗಳು ಪಳೆಯುಳಿಕೆಗಳ ಅವಶೇಷದಂತೆ ಕಾಣಬರುತ್ತಿದ್ದು, ನೋಡುಗರಿಗೆ ಅಸಹ್ಯವೆನಿಸಿದೆ.ಬೆಂಗಳೂರಿನ ಸಂಸ್ಥೆಯೊಂದು ವಸ್ತು ಪ್ರದರ್ಶನ ಮಳಿಗೆ ನಿರ್ಮಿಸಲು ಅನುಮತಿ ಕೋರಿದ್ದು, ನಗರಸಭೆಯವರು ಯಾವದೇ ಅನುಮತಿ ನೀಡಿಲ್ಲ. ಆದರೆ ಸಂಸ್ಥೆಯವರು ಯಾರದೇ ಗಮನಕ್ಕೆ ತಾರದೆ ಏಕಾಏಕಿ ಪೆಂಡಾಲ್ ಹಾಕಲು ಮುಂದಾಗಿದ್ದು, ಕ್ರೀಡಾಪ್ರೇಮಿಗಳ ಪ್ರತಿರೋಧದಿಂದಾಗಿ ವಿಷಯವರಿತ ನಗರಸಭೆ ಅದನ್ನು ಸ್ಥಗಿತಗೊಳಿಸಿದೆ. ‘ಯಾರನ್ನೋ’ ನಂಬಿಕೊಂಡು ಬಂದಿರುವ ಸಂಸ್ಥೆಯವರು ಇದೀಗ ಪೆಂಡಾಲ್ ಅನ್ನು ಬಿಚ್ಚದೆ ಪ್ರದರ್ಶನ ಹಾಗೂ ಮಾರಾಟಕ್ಕೆ ತಂದಿರುವ ವಸ್ತುಗಳೊಂದಿಗೆ ಮೈದಾನದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇತ್ತ ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ನಗರಸಭೆ ತೀರ್ಮಾನಿಸಿದೆ. ಆದರೆ ಅದಕ್ಕೂ ಮುನ್ನ ಈ ಹಿಂದೆ ನಡೆದಿರುವ ಸಭೆಗಳಲ್ಲಿ ಯಾವದೇ ಕಾರಣಕ್ಕೂ ಮೈದಾನದಲ್ಲಿ ಪ್ರದರ್ಶನ, ವಾಹನ ನಿಲುಗಡೆಗೆ ಅವಕಾಶ ನೀಡಬಾರದೆಂದು ಇದೇ ನಗರಸಭೆ ನಿರ್ಧಾರ ಕೈಗೊಂಡಿದ್ದು, ಇದೀಗ ನಗರಸಭೆಯವರಿಗೆ ಮುಳ್ಳಿನ ಹಾಸಿಗೆ ಮೇಲೆ ಕುಳಿತಂತಾಗಿದೆ. ಅಂದ ಹಾಗೆ ಇಲ್ಲಿ ಸಂಸ್ಥೆಯವರಿಗೆ ‘ಸಹಾಯಹಸ್ತ’ ಚಾಚಿದವರು ಯಾರೆಂಬದೇ ಪ್ರಶ್ನೆ...? - ಸಂತೋಷ್