ಮಡಿಕೇರಿ, ಆ. 20: ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಹಾಸನ ಮೂಲದ ಇಬ್ಬರು ವ್ಯಕ್ತಿಗಳನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಮಾರಾಟ ಮಾಡಲು ಬಳಸುತ್ತಿದ್ದ ಮೋಟಾರ್ ಬೈಕ್, ಸುಮಾರು 1 ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನ ಜಿಲ್ಲೆಯ ಕೊಣನೂರು ಹೋಬಳಿಯ ಕಟ್ಟೆಪುರ ಗ್ರಾಮದ ಅಪ್ಪಣ್ಣಗೌಡ ಎಂಬವರ ಪುತ್ರ ವೆಂಕಟೇಶ್ (40) ಹಾಗೂ ಗದ್ದಿ ಗ್ರಾಮದ ದೇವಯ್ಯ ಎಂಬವರ ಪುತ್ರ ದಿನೇಶ್ (36) ಎಂಬವರು ಬಂಧಿತ ಆರೋಪಿಗಳು. ನಿನ್ನೆ ನಗರದ ಗೌಡ ಸಮಾಜದ ಬಳಿ ಈ ಇಬ್ಬರು ಬೈಕ್‍ನಲ್ಲಿ (ಕೆಎ 01-7893) ಆಗಮಿಸಿ ಸಣ್ಣ ಪೊಟ್ಟಣದಲ್ಲಿ ಗಾಂಜಾ ತುಂಬಿ ಮಾರಾಟಕ್ಕೆ ಯತ್ನಿಸುತ್ತಿದ್ದ ಸುಳಿವಿನ ಮೇಲೆ ನಗರ ಅಪರಾಧ ಪತ್ತೆ ದಳದ ಪೊಲೀಸರು ಧಾಳಿ ನಡೆಸಿದ್ದಾರೆ. ಈ ವ್ಯಕ್ತಿಗಳ ಶೋಧ ನಡೆಸಿದ ಸಂದರ್ಭ ಬ್ಯಾಗ್, ಜರ್ಕೀನ್‍ನಲ್ಲಿ 88 ಗಾಂಜಾ ಪೊಟ್ಟಣಗಳು ಪತ್ತೆಯಾಗಿದ್ದು, ಬೈಕ್ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ.

ಗಾಂಜಾ ಮಾಲನ್ನು ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ನೀಡಿದ್ದು, ಅವರ ಹೆಸರು, ವಿಳಾಸ ಗೊತ್ತಿಲ್ಲ ಎಂದು ಆರೋಪಿಗಳು ತಿಳಿಸಿದ್ದಾರೆ. ಎಸ್ಪಿ ರಾಜೇಂದ್ರ ಪ್ರಸಾದ್, ನಗರ ಸಿ.ಪಿ.ಐ. ಮೇದಪ್ಪ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಎಸ್.ಐ. ವೆಂಕಟರಮಣ, ಸಿಬ್ಬಂದಿಗಳಾದ ಸುಬ್ಬಯ್ಯ, ಉತ್ತಪ್ಪ, ಸುಮೇಶ್, ಮಧುಸೂದನ್, ಸತೀಶ್, ರಾಜೇಶ್, ಪ್ರವೀಣ್, ಜಗದೀಶ್, ಅರುಣ್‍ಕುಮಾರ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.