ಸೋಮವಾರಪೇಟೆ, ಆ. 31: ಗತವೈಭವವನ್ನು ಕಳೆದುಕೊಳ್ಳುತ್ತಿರುವ ಪಟ್ಟಣದ ಆನೆಕೆರೆಗೆ ಕಾಯಕಲ್ಪ ನೀಡಲು ಇಲ್ಲಿನ ಪಟ್ಟಣ ಪಂಚಾಯಿತಿ ಮುಂದಾಗಿರುವದು ಸ್ವಾಗತಾರ್ಹ ಬೆಳವಣಿಗೆ.

ಮಾಧ್ಯಮ ಮಾಡಿದ ವರದಿಯಿಂದ ಎಚ್ಚೆತ್ತುಕೊಂಡ ಇಲ್ಲಿನ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯೆ ಸುಷ್ಮಾ, ಆರೋಗ್ಯ ನಿರೀಕ್ಷಕ ಉದಯ್‍ಕುಮಾರ್ ಕೆರೆ ಆವರಣಕ್ಕೆ ಭೇಟಿ ನೀಡಿದರು. ಈ ಸಂದರ್ಭ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಈಗಾಗಲೆ ಆನೆಕೆರೆಯಲ್ಲಿನ ನೀರಿನ ಜಲಮೂಲ ಕಾಣುತ್ತಿಲ್ಲ. ಈ ಕೆರೆಯ ತಡೆಗೋಡೆ ಶಿಥಿಲಾವಸ್ಥೆಯಲ್ಲಿರುವದರಿಂದ ಮಳೆ ನೀರು ಕೂಡ ಸಂಗ್ರಹವಾಗಿ ನಿಲ್ಲುತ್ತಿಲ್ಲ. ಈ ಬಗ್ಗೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಮಳೆಕುಯ್ಲು ಮೂಲಕ ನೀರು ಸಂಗ್ರಹಿಸುವ ನಿರ್ದಾರ ಕೈಗೊಳ್ಳಲಾಗಿತ್ತು. ನಂತರದ ತಜ್ಞರ ಬಳಿ ಆ ಬಗ್ಗೆ ವಿಚಾರಿಸಿದಾಗ ಈಗಾಗಲೇ ಸ್ವಲ್ಪ ಪ್ರಮಾಣದ ನೀರು ಸಂಗ್ರವಾಗಿರುವದರಿಂದ ತಡೆಗೋಡೆ ಸರಿಪಡಿಸಲು ಅಸಾಧ್ಯ. ಮಳೆಗಾಲ ಕಳೆದ ನಂತರವಷ್ಟೆ ಕಾಮಗಾರಿ ಆರಂಭಿಸಲಾಗುವದೆಂದರು. ಮುಂದಿನ ದಿನಗಳಲ್ಲಿ ಕಾಮಗಾರಿಗೆ ಪ್ರತ್ಯೇಕವಾದ ಅನುದಾನವಿಲ್ಲ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅವರು ಆನೆಕೆರೆಯ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಸರ್ಕಾರದ ಗಮನ ಸೆಳೆಯುವ ಮೂಲಕ ಅನುದಾನ ಪಡೆಯಬೇಕಾಗಿದೆ ಎಂದರು.

ಪೂಜ್ಯ ಭಾವನೆಯಿಂದ ಕಾಣುತ್ತಿದ್ದ ಹಾಗೂ ಪೂಜಿಸುತ್ತಿದ್ದ ಕೆರೆ ಆವರಣದೊಳಗೆ ಪುಂಡರು ರಾತ್ರಿ ವೇಳೆಯಲ್ಲಿ ಮದ್ಯಪಾನ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾಡಿಕೊಂಡಿರುವದು ಕಾಣ ಬರುತ್ತಿದೆ. ಕೆಲವರು ತಮ್ಮ ಮನೆಯಲ್ಲಿನ ಒಡೆದ ದೇವರ ಫೋಟೋ ಹಾಗೂ ಪೂಜಾ ಸಾಮಗ್ರಿಗಳನ್ನು ತಂದು ಕೆರೆಯ ನೀರಿನಲ್ಲಿ ಹಾಕಿರುವದು, ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಪೂಜಾ ತ್ಯಾಜ್ಯಗಳನ್ನು ತಂದು ನೀರಿಗೆ ಹಾಕಿ ನೀರನ್ನು ಕಲುಷಿತಗೊಳಿಸಲಾಗಿದೆ. ಇದು ಸರಿಯಲ್ಲ. ಪೂಜ್ಯ ಭಾವನೆಯಿಂದ ಕಾಣುತ್ತಿದ್ದ ಆನೆಕೆರೆಯ ನೀರು ಸೇರಿದಂತೆ ಆವರಣವನ್ನು ಅಶುಚಿತ್ವದಿಂದ ಕೂಡುವಂತೆ ಮಾಡುವದನ್ನು ಬಿಟ್ಟು ಸಚ್ಛತೆಗೆ ಆದ್ಯತೆ ನೀಡಬೇಕೆಂದು ಅಧ್ಯಕ್ಷೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇದೀಗ ಪಟ್ಟಣ ಪಂಚಾಯಿತಿಯ ಕಾರ್ಮಿಕರು ಆನೆಕೆರೆಯ ಶುಚಿತ್ವ ಕಾರ್ಯದಲ್ಲಿ ತೊಡಗಿದ್ದಾರೆ.ಆದರೆ ವರ್ಷಕ್ಕೆ ಎರಡು ಮೂರು ಬಾರಿಯಾದರೂ ಈ ಕೆರೆಯ ಶುಚಿತ್ವ ಕಾರ್ಯವನ್ನು ಕೈಗೊಂಡಿದ್ದರೆ ಆನೆಕೆರೆ ಇಂತಹ ದುಸ್ಥಿತಿಗೆ ಬರುತ್ತಿರಲಿಲ್ಲ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಪಾಯದಂಚಿನಲ್ಲಿ ಆವರಣಗೋಡೆ !: ರಸ್ತೆಗೊಂದಿಕೊಂಡಂತಿದ್ದ ಇಲ್ಲಿನ ಆನೆಕರೆಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ 1910ರಲ್ಲಿ ಆಲೆಕಟ್ಟೆಯ ಹನುಮಾ ಮೇಸ್ತ್ರಿ ಎಂಬವರು ಆವರಣಗೋಡೆ ನಿರ್ಮಿಸಿಕೊಟ್ಟಿದ್ದರು. ಆ ಗೋಡೆ ಶತಮಾನಕ್ಕೂ ಹಳೆಯದಾದ ಹಿನ್ನೆಲೆಯಲ್ಲಿ ಹಾಗೂ ಅದರಡಿಯಲ್ಲಿದ್ದ ತಡೆಗೋಡೆಯ ಕಲ್ಲುಗಳು ಕಿತ್ತು ಬಿದ್ದಿರುವದರಿಂದ ಅವರಣಗೋಡೆ ಬೀಳುವ ಸ್ಥಿತಿ ತಲುಪಿದೆ. ಈ ಕೆರೆ ವೀರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿಗೊಂದಿಕೊಂಡಂತೆ ಇದ್ದು ಪ್ರತಿನಿತ್ಯ ಭಾರೀ ವಾಹನಗಳು ಸೇರಿದಂತೆ ನೂರಾರು ಶಾಲಾ ವಿದ್ಯಾರ್ಥಿಗಳು ಈ ಮಾರ್ಗವಾಗಿ ಸಾಗುತ್ತಿರುತ್ತಾರೆ. ರಸ್ತೆ ಬದಿ ಹಾಗೂ ಆವರಣ ಗೋಡೆಯ ಮಧ್ಯೆ ಬಿರುಕು ಬಿಟ್ಟಿದ್ದು ವಾಹನಗಳು ಆವರಣ ಗೋಡೆ ಸಮೀಪದಲ್ಲಿ ಹಾದು ಹೋಗುವ ಸಂದರ್ಭ ವಾಹನ ಸಹಿತ ಆವರಣಗೋಡೆ ಕುಸಿದು ಬೀಳುವ ಸಂದರ್ಭವೇ ಹೆಚ್ಚಿದ್ದು ಜೀವಾಪಾಯವಾಗುವ ಮುನ್ನ ಲೋಕೋಪಯೋಗಿ ಇಲಾಖೆಯವರು ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎನ್ನುವದು ಸಾರ್ವಜನಿಕರ ಅಭಿಪ್ರಾಯವಾಗಿದೆ.