ಕುಶಾಲನಗರ, ಆ. 25: ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಹಾಗೂ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಕುಶಾಲನಗರ ಪೊಲೀಸ್ ಇಲಾಖೆ ಆಶ್ರಯದಲ್ಲಿ ಸಭೆ ನಡೆಯಿತು.ಮುಂಬರುವ ಗಣೇಶೋತ್ಸವ ಸಂದರ್ಭ ಕುಶಾಲನಗರ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಕುಶಾಲನಗರ ಎಪಿಸಿಎಂಸ್ ಸಭಾಂಗಣದಲ್ಲಿ ಡಿವೈಎಸ್ಪಿ ಟಿ. ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಠಾಣೆಗಳ ವ್ಯಾಪ್ತಿಯ ನೂರಕ್ಕೂ ಅಧಿಕ ನಾಗರಿಕರು ಪಾಲ್ಗೊಂಡಿದ್ದರು. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಹಿನ್ನೆಲೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಡಿವೈಎಸ್ಪಿ ಟಿ. ಕುಮಾರ್ ನಿರ್ದೇಶನ ನೀಡಿದರು. ವಿಸರ್ಜನೆ ಸಂದರ್ಭ ನದಿ, ತೊರೆಗಳಲ್ಲಿ ಮೂರ್ತಿ ವಿಸರ್ಜನೆ ಮಾಡಲು ನಿರ್ಬಂಧ ವಿಧಿಸಲಾಗಿದೆ. ಸರಕಾರದ ಆದೇಶದಂತೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗುಡ್ಡೆ ಹೊಸೂರು, ಗೊಂದಿಬಸವನಹಳ್ಳಿ, ಮುಳ್ಳುಸೋಗೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ಒಳಗೆ ಕಾರ್ಯಕ್ರಮ ಮುಕ್ತಾಯ ಗೊಳಿಸುವಂತೆ ಸೂಚನೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಒಟ್ಟು 90 ಕ್ಕೂ ಅಧಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಗೊಂಡಿದ್ದು, ಈ ಸಾಲಿನಲ್ಲಿ ಈಗಾಗಲೆ 50 ಕ್ಕೂ ಅಧಿಕ ಅರ್ಜಿಗಳು ಬಂದಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗಣಪತಿ ಪ್ರತಿಷ್ಠಾಪನೆಗೆ ಮುನ್ನ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಅರ್ಜಿ ನಮೂನೆ ಪಡೆದು ಸಂಪೂರ್ಣ ಮಾಹಿತಿ ಒದಗಿಸಿ ಅನುಮತಿ ದೊರೆತ ಮೇಲೆ ಮುಂದಿನ ಕ್ರಮಕ್ಕೆ ಅನುವು ಮಾಡಿಕೊಡಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ. ಸಭೆಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಶಿವಪ್ಪ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿ ಗಳಾದ ಮಹೇಶ್, ಜಗದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಕಂದಾಯ ನಿರೀಕ್ಷಕ ನಂದಕುಮಾರ್ ಇದ್ದರು.