ಕುಶಾಲನಗರ, ಸೆ. 16: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಗಣಪತಿ ತಂದೆ ಎಂ.ಕೆ. ಕುಶಾಲಪ್ಪ ಮತ್ತು ಸಹೋದರ ಎಂ.ಕೆ. ಮಾಚಯ್ಯ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದು, ಮಾಜಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎ.ಎಂ. ಪ್ರಸಾದ್ ಮತ್ತು ಸಿಐಡಿ ಸಂಸ್ಥೆಯನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.

ಜುಲೈ 7 ರಂದು ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಮಡಿಕೇರಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುನ್ನ ಸ್ಥಳೀಯ ಚಾನಲ್ ಒಂದಕ್ಕೆ ಸಂದರ್ಶನ ನೀಡಿ ತನ್ನ ಸಾವಿಗೆ ಈ ಮೇಲಿನ ವ್ಯಕ್ತಿಗಳು ಕಾರಣ ಎಂದು ಹೇಳಿಕೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಪ್ರಕರಣ ರಾಷ್ಟ್ರವ್ಯಾಪಿ ಚರ್ಚೆಯಾಗುವದರೊಂದಿಗೆ ರಾಜ್ಯದ ಸಚಿವರಾಗಿದ್ದ ಕೆ.ಜೆ. ಜಾರ್ಜ್ ರಾಜೀನಾಮೆ ನೀಡುವ ಪ್ರಮೇಯ ಒದಗಿತ್ತು.

ಇದೀಗ ಮಡಿಕೇರಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಈ ತಿಂಗಳ 19 ರಂದು ವಿಚಾರಣೆಗೆ ಬರಲಿದೆ.

ಗಣಪತಿ ಮೃತರಾಗುವ ಮುನ್ನ ತನ್ನ ರಿವಾಲ್ವರ್‍ನಿಂದ ಎರಡು ಸುತ್ತು ಗುಂಡು ಹಾರಿಸಿಕೊಂಡಿದ್ದರು. ಆದರೆ ತನಿಖಾಧಿಕಾರಿಗಳು ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿರುವ ಘಟನೆಗೆ ಸಂಬಂಧಿಸಿದಂತೆ ಗಣಪತಿ ಪತ್ನಿ ಮತ್ತು ಪುತ್ರ ಪೊಲೀಸರಿಗೆ ದೂರು ನೀಡಿದರೂ ಈ ಬಗ್ಗೆ ಯಾವದೇ ಕ್ರಮ ಕಂಡುಬಂದಿಲ್ಲ. ಜೆಎಂಎಫ್‍ಸಿ ನ್ಯಾಯಾಲಯದ ಆದೇಶದ ನಂತರ ಎಫ್‍ಐಆರ್ ದಾಖಲಾಗಿದೆ.

ಘಟನೆಯಲ್ಲಿ ರಾಜ್ಯದ ಮಾಜಿ ಗೃಹ ಸಚಿವರು, ಹಿರಿಯ ಐಪಿಎಸ್ ಅಧಿಕಾರಿಗಳು ಆರೋಪಿ ಸ್ಥಾನದಲ್ಲಿದ್ದು, ಇದರ ತನಿಖೆಯನ್ನು ಇವರುಗಳ ಅಧೀನ ಅಧಿಕಾರಿಗಳು ನಡೆಸುತ್ತಿರುವದು ಸಮಂಜಸವಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮುಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ಈ ಮೂಲಕ ಅಸಾಧ್ಯವಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಗಣಪತಿ ಕುಟುಂಬ ಸದಸ್ಯರು ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.