ಮಡಿಕೇರಿ, ಸೆ. 17: ರಾಜ್ಯವನ್ನೇ ತಲ್ಲಣಗೊಳಿಸಿದ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಸಿ.ಬಿ.ಐ.ಗೆ ವಹಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸಹೋದರ ಎಂ.ಕೆ. ಮಾಚಯ್ಯ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಕೋರ್ಟ್ ಹಾಲ್ ನಂ. 11 ರಲ್ಲಿ ರಿಟ್ ಅರ್ಜಿ ವಿಚಾರಣೆಯು ಜಿಲ್ಲೆಯವರೇ ಆದ ನ್ಯಾಯಾಧೀಶ ಅಜ್ಜಿಕುಟ್ಟಿರ ಬೋಪಣ್ಣ ಅವರಿದ್ದ ಪೀಠದ ಮುಂದೆ ಬಂದಿದ್ದು, ಅವರು ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದಿಂದ ಹಿಂದೆ ಸರಿದಿದ್ದಾರೆ.

ವಾದಗಳ ಪರ ವಕೀಲ ಪವನ್‍ಚಂದ್ರ ಶೆಟ್ಟಿ ವಾದ ಮಂಡಿಸಿ ಪ್ರಕರಣವನ್ನು ಸಿ.ಬಿ.ಐ.ಗೆ ವರ್ಗಾಯಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯನ್ನು ಮಂಡಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕ ಅಜ್ಜಿಕುಟ್ಟಿರ ಪೊನ್ನಣ್ಣ ತೀವ್ರ ಪ್ರತಿರೋಧವನ್ನು ಒಡ್ಡಿದ್ದರು. ಇದರಿಂದ ವಿಚಲಿತರಾದ ನ್ಯಾಯಾಧೀಶ ಅಜ್ಜಿಕುಟ್ಟಿರ ಬೋಪಣ್ಣ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಮುಂದೆ ಇನ್ನೋರ್ವ ನ್ಯಾಯಾಧೀಶರು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಯಾವ ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದಾರೆ ಎಂಬದು ನಿರ್ಧಾರ ವಾಗಬೇಕಾಗಿದೆ.