ಮಡಿಕೇರಿ, ಜ. 26: ಗಣತಂತ್ರದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಮನಪೂರ್ವಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್. ಸೀತಾರಾಮ್ ಅವರು ಕರೆ ನೀಡಿದರು.ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ನಡೆದ 68ನೇಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಸಚಿವರು ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ನಮ್ಮ ರಾಷ್ಟ್ರದ ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬ ಮಾತ್ರವಲ್ಲ, ಭಾರತೀಯರ ಸಾರ್ವಭೌಮತ್ವ ಮತ್ತು ದೇಶದ ಸಮಸ್ತ ನಾಗರೀಕರ ದಿನವೂ ಹೌದು. ಈ ಶುಭ ದಿನದಂದು ಶುಭ ಕಾಮನೆಗಳ ಜತೆಗೆ ಸಾರ್ವಜನಿಕರ ಹಿತಕ್ಕೆ ಸ್ಪಂದಿಸಿ ಕೊಡಗು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ನಾವೆಲ್ಲರೂ ಏಕ ಮನಸ್ಸಿನಿಂದ ಭಾಗಿಯಾಗೋಣ ಎಂದು ಅವರು ಹೇಳಿದರು.
ದೇಶದ ಪ್ರಜಾತಂತ್ರ ವ್ಯವಸ್ಥೆಯ ಬೇರಿಗೆ ನೀರು ಸುರಿದು ರಾಷ್ಟ್ರದ ಬೃಹತ್ ಬೆಳವಣಿಗೆಗೆ ತಮ್ಮ ಬದುಕು ಸಮರ್ಪಿಸಿದ ದೇಶಾಭಿಮಾನಿ ಬಂಧುಗಳನ್ನು ಪ್ರಥಮವಾಗಿ ಸ್ಮರಿಸಿಕೊಳ್ಳಬೇಕೆಂದ ಸಚಿವರು ಹಿಂದಿನ 7 ದಶಕಗಳಲ್ಲಿ ದೇಶಕ್ಕೆ ಎದುರಾದ ಹಲವಾರು ಸಮಸ್ಯೆ, ಸವಾಲುಗಳನ್ನು ಉಮ್ಮನಸ್ಸಿನಿಂದ ಎದುರಿಸಿ ಗಣ ತಂತ್ರವನ್ನು ಸಂರಕ್ಷಿಸಲಾಗಿದೆ. ದೇಶಕ್ಕೆ ಎಲ್ಲರಿಗೂ ಒಪ್ಪುವಂತಹ ಸಂವಿಧಾನ ರೂಪಿಸುವ ಸವಾಲನ್ನು ಕೈಗೆತ್ತಿಕೊಂಡು ಸದ್ಭವ ಮತ್ತು ಸಮರ್ಪಣೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಉತ್ಕøಷ್ಟ ಸಂವಿಧಾನವನ್ನು ರೂಪಿಸಿ ದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಜನತಾಂತ್ರಿಕ ಸಾರ್ವ ಭೌಮತ್ವವನ್ನು ಸಂರಕ್ಷಿಸುವ ಲೋಕ ಸಮ್ಮತವಾದ ಸಂವಿಧಾನ ನಮ್ಮದಾಗಿದೆ ಎಂದು ಅವರು ನೆನಪಿಸಿದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಕಟಿಬದ್ಧವಾಗಿದ್ದು, ಹಂತ ಹಂತವಾಗಿ ಅಗತ್ಯ ಯೋಜನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಕಾರ್ಯಕ್ರಮಗಳ ಜಾರಿಗೆ ಒತ್ತು ನೀಡಿದೆ ಎಂದ ಅವರು ಜಿಲ್ಲೆಯಲ್ಲಿ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು,
(ಮೊದಲ ಪುಟದಿಂದ) ಯೋಜನೆಗಳ ಕುರಿತಾಗಿ ಸಮಗ್ರ ಮಾಹಿತಿಯನ್ನು ಸಚಿವರು ಈ ಸಂದರ್ಭ ನೀಡಿದರು.
ಸಚಿವರ ಸಂದೇಶದಲ್ಲಿನ ಸಂಕ್ಷಿಪ್ತ ಮಾಹಿತಿ
* ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಾಣಕ್ಕೆ ಜಾಗ ಗುರುತು. * ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ. 3.25 ಕೋಟಿ ವೆಚ್ಚದಲ್ಲಿ 151 ಕಾಮಗಾರಿ. * ವಿಧಾನ ಸಭಾ ಕ್ಷೇತ್ರದಲ್ಲಿ ಐದೈದು ಗ್ರಾಮ ಅಭಿವೃದ್ಧಿಗೆ ರೂ. 7.50 ಕೋಟಿ.
* ಕಾಡಾನೆಗಳ ಚಲನ - ವಲನಗಳ ಬಗ್ಗೆ ಮಾಹಿತಿ ನೀಡಲು ಎಸ್ಎಂಎಸ್ ಅಲರ್ಟ್ ಸಿಸ್ಟಮ್, ತೇಗದ ನೆಡುತೋಪಿನಲ್ಲಿ ಬೀಜ ಬಿತ್ತನೆಗೆ ಕ್ರಮ. * ಸ್ವಚ್ಛ ಭಾರತ್ ಮಿಷನ್ನಲ್ಲಿ 1923 ಶೌಚಾಲಯ ನಿರ್ಮಾಣ. * ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಸಹಾಯಧನ. * ಭಾಗಮಂಡಲ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ಪಾರ್ಕ್ ಕಾಮಗಾರಿ ಪ್ರಗತಿಯಲ್ಲಿ. * ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಗೆ 2.4 ಎಕರೆ ಜಾಗ ಹಸ್ತಾಂತರ. * ಮಡಿಕೇರಿ ಖಾಸಗಿ ಬಸ್ ನಿಲ್ದಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣ. ಸಧ್ಯದಲ್ಲಿ ಕಾಮಗಾರಿ ಪ್ರಾರಂಭ.
ಧ್ವಜಾರೋಹಣ
ಸಂದೇಶ ನೀಡುವ ಮುನ್ನ ಧ್ವಜಾರೋಹಣ ನೆರವೇರಿಸಿದ ಸಚಿವರು ಪೊಲೀಸ್, ಎನ್ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಈ ತಂಡಗಳಿಂದ ಪಥ ಸಂಚಲನ ನಡೆಯಿತು. ಸಾಧಕರಿಗೆ ಸನ್ಮಾನದೊಂದಿಗೆ, ವಿವಿಧ ಶಾಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಅಕಾಡೆಮಿ ಅಧ್ಯಕ್ಷರುಗಳಾದ ಬಿ.ಎಸ್. ತಮ್ಮಯ್ಯ, ಕೊಲ್ಯದ ಗಿರೀಶ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಎಸ್ಪಿ ರಾಜೇಂದ್ರ ಪ್ರಸಾದ್, ಸಿಇಓ ಚಾರುಲತಾ, ಎಡಿಸಿ ಸತೀಶ್ಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿ ದ್ದರು.