ಮಡಿಕೇರಿ, ಜು. 20: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿ ಜಿಲ್ಲೆಯ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿ ಕೋರಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಮತ್ತಿತರ ಸುಮಾರು 8 ಹುದ್ದೆಗಳು ಖಾಲಿ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಭಾಗಮಂಡಲ, ಚೆಯ್ಯಂಡಾಣೆ, ಮೂರ್ನಾಡು, ಸಂಪಾಜೆ, ಚೇರಂಬಾಣೆ, ಕುಟ್ಟಂದಿ, ಕಣ್ಣಂಗಾಲ, ಬಾಳೆಲೆ, ಮಾಲ್ದಾರೆ, ಚೆನ್ನಯ್ಯನ ಕೋಟೆ, ಹುದಿಕೇರಿ, ಕೊಡ್ಲಿಪೇಟೆ, ಹೆಬ್ಬಾಲೆ, ಶಿರಂಗಾಲ, ಶಾಂತಳ್ಳಿ, ಬಿಳಿಗೇರಿ, ಸುಂಟಿಕೊಪ್ಪ, ಮಾದಾಪುರ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಬಾಣೆ ಜಮೀನುಗಳನ್ನು ಹಲವಾರು ವರ್ಷಗಳಿಂದ ಸಕ್ರಮಗೊಳಿಸದಿರುವ ಬಗ್ಗೆ ಹಾಗೂ ಈ ಜಮೀನುಗಳಿಗೆ ಕಂದಾಯ ನಿಗದಿ ಮಾಡದೆ ಇರುವದರಿಂದ ಸಾರ್ವಜನಿಕರಿಗೆ ತುಂಬಾ ಅನಾನುಕೂಲ ಉಂಟಾಗಿದೆ. ಈ ಜಮೀನುಗಳನ್ನು ಸರ್ವೆ ಮಾಡಿಸಿ ಕಂದಾಯ ನಿಗದಿಪಡಿಸಲು ಸುಮಾರು 40 ಸರ್ವೆಯರ್ಗಳ ಅಗತ್ಯವಿದೆ. ಈ ಕುರಿತು 2015ರ ಸೆಪ್ಟೆಂಬರ್ 3 ರಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಕಂದಾಯ ನಿಗದಿಪಡಿಸುವ ನಿರ್ದಿಷ್ಟ ಉದ್ದೇಶಕ್ಕೆ ಹಾಗೂ ನಿರ್ದಿಷ್ಟ ಅವಧಿ ಗೊತ್ತುಪಡಿಸಿ ಒಬ್ಬ ವಿಶೇಷ ಜಿಲ್ಲಾಧಿಕಾರಿ ಅವರನ್ನು ನೇಮಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಸಂಬಂಧ ಹಲವು ಹುದ್ದೆಗಳನ್ನು ಭರ್ತಿ ಮಾಡಬೇಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.