ಸೋಮವಾರಪೇಟೆ, ಜು. 10: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಸಂಘದ ವಿರುದ್ಧ ಬಿ.ಆರ್.ಪಿ.ಯೋರ್ವರು ಸುಳ್ಳು ಆರೋಪ ಮಾಡುತ್ತಿದ್ದು, ಇವರ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಸಭೆ ಬಹಿಷ್ಕರಿಸಿ, ಪ್ರತಿಭಟಿಸಿದ ಘಟನೆ ನಡೆಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಮುಖ್ಯ ಶಿಕ್ಷಕರ ಸಭೆಯನ್ನು ಬಿಇಒ ಆಯೋಜಿಸಿದ್ದ ಸಂದರ್ಭ, ಬಿಇಒ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿರುವ ಬಿಆರ್‍ಪಿ ಕೆ.ಜಿ.ನಾಗೇಂದ್ರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಶಿಕ್ಷಕರು ಬಿಇಒ ಅವರನ್ನು ಆಗ್ರಹಿಸಿದರು. ಉತ್ತಮ ಕೆಲಸ ಮಾಡುತ್ತಿರುವ ಬಿಇಒ ಮಲ್ಲೇಸ್ವಾಮಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವದು ಖಂಡನೀಯ ಎಂದು ಸಭೆ ಬಹಿಷ್ಕರಿಸಿ ಹೊರ ನಡೆದರು.

ಬಿಆರ್‍ಪಿ ಕೆ.ಜಿ. ನಾಗೇಂದ್ರ, ಕರ್ತವ್ಯ ಲೋಪ ಎಸಗಿರುವ ಕಾರಣ ಇಲಾಖಾ ಮಟ್ಟದ ತನಿಖೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸಸ್ಪೆಂಡ್ ಆಗುವದು ಮನವರಿಕೆ ಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರು, ಜಿಲ್ಲಾಧಿಕಾರಿಗಳು, ಸಿಇಒ, ಡಿಡಿಪಿಐ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿ ನಿಧಿಗಳಿಗೆ ಸುಳ್ಳು ದೂರನ್ನು ನೀಡುತ್ತಿದ್ದಾರೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್. ಮಂಜುನಾಥ್ ದೂರಿದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮದ ಮೂಲಕ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿದೆ. ಬಿಆರ್‍ಪಿ ನಾಗೇಂದ್ರ ಅವರ ಎಲ್ಲಾ ಪ್ರಕರಣ ಗಳನ್ನು ಇಲಾಖಾ ಮಟ್ಟದ ತನಿಖೆ ನಡೆಸಬೇಕು ಹಾಗೂ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಚೆನ್ನಬಸಪ್ಪ ಸಭಾಂಗಣದ ಹೊರಗಿದ್ದ ಮುಖ್ಯ ಶಿಕ್ಷಕರುಗಳು, ಅಧಿಕಾರಿಗಳ ಮನವಿ ಮೇರೆಗೆ ನಂತರ ಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ.ಕೆ.ಬಸವರಾಜು, ವಲಯ ಉಪಾಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕರಾದ ಚಂದ್ರಮ್ಮ, ಪುಟ್ಟಸ್ವಾಮಿ, ಸಿಆರ್‍ಪಿ, ಬಿಆರ್‍ಪಿಗಳು ಇದ್ದರು.