ಮಡಿಕೇರಿ, ಜ. 21: ಕ್ರೀಡೆ ಮತ್ತು ವ್ಯಾಯಾಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಲಿ ಎಂದು ಕೊಡಗು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ನಿವೃತ್ತ ಮೇಜರ್ ಒ.ಎಸ್ ಚಿಂಗಪ್ಪ ಕರೆ ನೀಡಿದ್ದಾರೆ. ಕೊಡಗು ಪ್ರೆಸ್ಕ್ಲಬ್ನ 18ನೇ ವಾರ್ಷಿಕೋತ್ಸವದ ಅಂಗವಾಗಿ ಪತ್ರಿಕಾ ಭವನದ ಸಭಾಂಗಣದಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಲಾಗಿದ್ದ ಒಳಾಂಗಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿನಿತ್ಯದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಟ, ಓಟ ಮತ್ತು ವ್ಯಾಯಾಮ ಪ್ರಮುಕ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೇಹ ಮತ್ತು ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕ್ರೀಡೆ ಅಗತ್ಯ ಎಂದು ಚಿಂಗಪ್ಪ ಹೇಳಿದರು.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತನ್ನು ಉಲ್ಲೇಖಿಸಿದ ಅವರು ಇಂದು ನಾನಾ ಕಾರಣಗಳಿಂದ ಊಟ ಹಾಳಾಗಿದೆ, ನಮ್ಮ ಆಹಾರವೇ ವಿಷವಾಗಿದೆ ಎಂದು ವಿಷಾದಿಸಿದರು. ಮಾಜಿ ಸೈನಿಕರ ಕುರಿತು ಪತ್ರಿಕೆಗಳ ಕಾಳಜಿ ಮತ್ತು ಜಿಲ್ಲೆಯ ಆಗು-ಹೋಗುಗಳ ಕುರಿತು ಮಾಧ್ಯಮಗಳು ನೀಡುತ್ತಿರುವ ವಸ್ತುನಿಷ್ಠ ವರದಿ ಮತ್ತು ವಿಶ್ಲೇಷಣೆಗಳ ಕುರಿತು ಒ.ಎಸ್ ಚಿಂಗಪ್ಪ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ಕ್ಲಬ್ನ ಹಿರಿಯ ಉಪಾಧ್ಯಕ್ಷ ಶಶಿಸೋಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಪ್ರೆಸ್ಕ್ಲಬ್ನ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್, ಉಪಸ್ಥಿತರಿದ್ದರು.
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್ಕ್ಲಬ್ನ ಉಪಾಧ್ಯಕ್ಷ ಎಸ್. ಗಣೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕೊಡಗು ಪತ್ರಿಕಾಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ ಸ್ವಾಗತಿಸಿ, ಪ್ರೆಸ್ಕ್ಲಬ್ನ ನಿರ್ದೇಶಕ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಜಿಲ್ಲೆಯ ಪತ್ರಕರ್ತರಿಗಾಗಿ ಕೇರಂ, ಟೇಬಲ್ ಟೆನ್ನಿಸ್, ಚೆಸ್ ಹಾಗೂ ಕಾರ್ಡ್ ಸ್ಪರ್ಧೆಗಳು ನಡೆಯಿತು.ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಲಿ: ಒ.ಎಸ್. ಚಿಂಗಪ್ಪ