ಸೋಮವಾರಪೇಟೆ, ಅ. 2: ದಿನನಿತ್ಯ, ಬಾಡಿಗೆ, ವರ್ಕ್‍ಶಾಪ್ ಕೆಲಸ, ಬೇರೆ ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆಯನ್ನು ಬದಿಗೊತ್ತಿದ ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರು ಇಂದು ಕ್ರೀಡಾ ಸ್ಫ್ಪೂರ್ತಿಯೊಂದಿಗೆ ಮೈದಾನದಲ್ಲಿ ಸಂಭ್ರಮಿಸಿದರು.

ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಿರುವ ಆಯುಧ ಪೂಜೋತ್ಸವ ಪ್ರಯುಕ್ತ ಇಂದು ಸಂಘದ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸ್ಥಳೀಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.

ದಿನನಿತ್ಯ ಬಾಡಿಗೆ, ವಾಹನಗಳ ರಿಪೇರಿ, ವರ್ಕ್‍ಶಾಪ್‍ಗಳಲ್ಲಿ ವೆಲ್ಡಿಂಗ್ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಲ್ಲೇ ಸಮಯ ಕಳೆಯುವ ಮಂದಿ ಇಂದು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಅಮಿತೋತ್ಸಾಹದೊಂದಿಗೆ ಭಾಗವಹಿಸಿ, ಕ್ರೀಡಾಸ್ಫ್ಪೂರ್ತಿ ಮೆರೆದರು.

ಸಂಘದ ಸದಸ್ಯರುಗಳಿಗೆ ಗುಡ್ಡಗಾಡು ಓಟ, ಬಾಂಬ್ ಇನ್ ದ ಸಿಟಿ, ಹಗ್ಗಜಗ್ಗಾಟ, ಕಬಡ್ಡಿ ಸೇರಿದಂತೆ ಇನ್ನಿತರ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಯಸ್ಸಿನ ಭೇದ ಮರೆತು ವಾಹನ ಚಾಲಕರು, ಮಾಲೀಕರು, ಮೋಟಾರು ಕೆಲಸಗಾರರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ನಡೆದ ಮಹಾತ್ಮಾ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಹಾಗೂ ಕ್ರೀಡಾಕೂಟವನ್ನು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳ್ಳಬೇಕಾದರೆ ಇಡೀ ಸಮಾಜವೇ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಾಹನ ಚಾಲಕರು ಹಾಗೂ ಮಾಲೀಕರ ಸಂಘ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವರ್ಷವಿಡೀ ತಮ್ಮ ಕರ್ತವ್ಯ ಹಾಗೂ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಈ ವರ್ಗದ ಕಾರ್ಮಿಕರಿಗೆ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿಯೂ ಕ್ರೀಡಾಸ್ಫೂರ್ತಿ ಬೆಳೆಯುವಂತೆ ಮಾಡಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಂದಕುಮಾರ್ ವಹಿಸಿ ಮಾತನಾಡಿ, ಆಯುಧ ಪೂಜೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಬಾಲಕೃಷ್ಣ, ಖಾದರ್, ಕೆ.ಜಿ. ಸುರೇಶ್, ಕಾಶಿಗೋಪಾಲ್, ಶೇಖರ್, ಪರಮೇಶ್, ಚನ್ನಪ್ಪ, ಪ್ರಕಾಶ್, ದೀಪಕ್, ಟಿ.ಕೆ. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.