ಪೊನ್ನಂಪೇಟೆ, ಅ. 27: ಕ್ರೀಡಾ ಮನೋಭಾವದಿಂದ ಜರುಗುವ ಯಾವದೇ ಕ್ರೀಡಾಕೂಟಗಳು ಸಮಾಜದ ಸ್ವಾಸ್ಥ್ಯ ಕಾಪಾಡುವದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜಾತಿ, ಧರ್ಮ, ಮತ, ಲಿಂಗಭೇದಗಳನ್ನು ಮೀರಿ ನಡೆಯುವ ಕ್ರೀಡಾಕೂಟಗಳು ಮನುಷ್ಯರಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ ಎಂದು ಮಾಯಮುಡಿಯ ಹಿರಿಯ ಕಾಫಿ ಬೆಳೆಗಾರ ಹಾಗೂ ನಿವೃತ್ತ ಯೋಧ ಆಪಟ್ಟಿರ ಬಿ. ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಮೀಪದ ಮಾಯಮುಡಿಯ ಕೋಲುಬಾಣೆ ಕಾವೇರಿ ಅಸೋಸಿಯೇಷನ್‍ನ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿವಿಧ ಕ್ರೀಡಾಕೂಟವನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಕೂಟಗಳು ಹೆಚ್ಚಾದಂತೆ ಅದು ಸಮಾಜದ ಉನ್ನತಿಗೆ ಪೂರಕವಾಗುತ್ತದೆ. ವಿವಿಧ ಕಾರಣಗಳಿಂದಾಗಿ ಮನುಷ್ಯರಲ್ಲಿ ಮೂಡುವ ಬಿರುಕಿನ ಕಂದಕದ ಅಂತರ ತಗ್ಗಿಸುವಲ್ಲಿ ಕ್ರೀಡಾಕೂಟಗಳು ನೆರವಾಗುತ್ತದೆ. ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು ಅಲ್ಲದೇ ಕ್ರೀಡಾಕೂಟದಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವ ಪ್ರವೃತ್ತಿಯು ಜನರಲ್ಲಿ ಹೆಚ್ಚಬೇಕು ಎಂದು ಕರೆ ನೀಡಿದರು.
ಬಳಿಕ ನಡೆದ ಕ್ರೀಡಾಕೂಟದಲ್ಲಿ ಸಮಗ್ರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ ಚಿರಿಯಪಂಡ ರವಿ ಪೂಣಚ್ಚ ಚಾಂಪಿಯನ್ ಆಗಿ ಮೂಡಿ ಬಂದರು. ಮಾಯಮುಡಿಯ ಆಪಟ್ಟಿರ ಎಸ್. ವಿಠಲ್ ನಾಚಯ್ಯ ಮತ್ತು ಅಪ್ಪನೆರವಂಡ ರವಿ ಕಾವೇರಪ್ಪ ಸಮಗ್ರ ಪ್ರಶಸ್ತಿಯನ್ನು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿ ಹಂಚಿಕೊಂಡರು. ಸೀಕ್ರೆಟ್ ಸವೆನ್ ವಿಭಾಗದ ಪಂದ್ಯದಲ್ಲಿ ಕೊಂಗಂಡ ಎಂ. ಉತ್ತಪ್ಪ ಪ್ರಥಮ, ಎಸ್.ಪಿ. ಪ್ರವೀಣ್ ದ್ವಿತೀಯ ಹಾಗೂ ಬಲ್ಯಂಡ ಎಂ. ಯೋಗೇಶ್ ತೃತೀಯ ಬಹುಮಾನ ಪಡೆದರು. 28 ವಿಭಾಗದ ಸ್ಪರ್ಧೆಯಲ್ಲಿ ಕಳ್ಳಿಚಂಡ ಎಸ್. ಪ್ರಸಾದ್ ಪ್ರಥಮ, ಚೆಪ್ಪುಡಿರ ಎಸ್. ಮುದ್ದಪ್ಪ ದ್ವಿತೀಯ ಸ್ಥಾನ ಪಡೆದರೆ, ತೃತೀಯ ಸ್ಥಾನವನ್ನು ಆಪಟ್ಟಿರ ಬಿ. ಸುಬ್ಬಯ್ಯ ಮತ್ತು ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವರು ಹಂಚಿಕೊಂಡರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಆಪಟ್ಟಿರ ಸಿ. ಪ್ರದೀಪ್ ಪ್ರಥಮ, ಚೆಪ್ಪುಡಿರ ಎಸ್. ಮುದ್ದಪ್ಪ ದ್ವಿತೀಯ ಹಾಗೂ ಕಂಜಿತಂಡ ಎ. ಪೊನ್ನಪ್ಪ ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಾಚಿಮಾಡ ಸಿ. ದೇವಾನಂದ ಪ್ರಥಮ, ಚೆಪ್ಪುಡಿರ ಟಿ. ಬೆಳ್ಳಿಯಪ್ಪ ದ್ವಿತೀಯ ಸ್ಥಾನ ಗಳಿಸಿದರು.
ಕೇರಂ ಸ್ಪರ್ಧೆಯಲ್ಲಿ ಪುಳ್ಳಂಗಡ ಜೆ. ಸತೀಶ್ ಪ್ರಥಮ, ಆಪಟ್ಟಿರ ಎನ್. ಸುಬ್ಬಯ್ಯ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಚೆಪ್ಪುಡಿರ ಟಿ. ಬೆಳ್ಯಪ್ಪ ಪ್ರಥಮ ಮತ್ತು ಕೊಂಗಂಡ ಭವ್ಯ ಗಣಪತಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಕಾರ್ಯದರ್ಶಿ ಶಿವಚಾರರ ಎಸ್. ಸುರೇಶ್, ಕ್ರೀಡಾ ಕಾರ್ಯದರ್ಶಿ ಆಪಟ್ಟಿರ ಎಸ್. ಟಾಟು ಮೊಣ್ಣಪ್ಪ, ಖಜಾಂಚಿ ನಾಮೇರ ರವಿ ದೇವಯ್ಯ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಗ್ರಾಮದ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಕೋಲುಬಾಣೆ ಕಾವೇರಿ ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆ ತಾ. 30 ರಂದು ಜರುಗಲಿದ್ದು, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅಂದು ಬಹುಮಾನ ವಿತರಿಸಲಾಗುವದು. ಮಹಾಸಭೆಗೆ ಮಾಜಿ ಶಾಸಕ ಸಿ.ಎಸ್. ಅರುಣ್ ಮಾಚಯ್ಯ, ಹಿರಿಯ ಸದಸ್ಯರಾದ ಎಸ್.ಕೆ. ಪೊನ್ನಪ್ಪ ಮತ್ತು ಎ.ಬಿ. ಸುಬ್ಬಯ್ಯ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ಅಧ್ಯಕ್ಷ ಕೆ.ಸಿ. ಸುಧೀರ್ ತಿಳಿಸಿದ್ದಾರೆ.