ಮಡಿಕೇರಿ, ನ. 4: ಮಡಿಕೇರಿಯ ಕೋಟೆ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ನೂತನ ಕಚೇರಿ ತೆರೆಯಲಾಗಿದ್ದು, ಇಂದು ಕಚೇರಿ ಕಾರ್ಯಾರಂಭಗೊಂಡಿತು. ಬೆಳಿಗ್ಗೆ ಪೂಜೆಯೊಂದಿಗೆ ಕಚೇರಿ ಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭ ವೀಣಾ ಅಚ್ಚಯ್ಯ ಅವರ ಅಭಿಮಾನಿ ಗಳು, ಹಿತೈಷಿಗಳು, ಕಾಂಗ್ರೆಸ್‍ನ ಪ್ರಮುಖರುಗಳಾದ ಬಿ.ಜಿ. ಮಿಟ್ಟು ಚಂಗಪ್ಪ, ಸುಮಾ ವಸಂತ್, ಕೆ.ಪಿ. ಚಂದ್ರಕಲಾ, ಬಿ.ಎಸ್. ತಮ್ಮಯ್ಯ, ಕೆ.ಕೆ. ಮಂಜುನಾಥ್ ಕುಮಾರ್, ಪಿ.ಕೆ. ಪೊನ್ನಪ್ಪ, ಪಾಪು ಸಣ್ಣಯ್ಯ ಸೇರಿದಂತೆ ಕಾಂಗ್ರೆಸ್‍ನ ವಿವಿಧ ಜನಪ್ರತಿನಿಧಿಗಳು ಪ್ರಮುಖರು ಪಾಲ್ಗೊಂಡು ಶುಭ ಕೋರಿದರು.
ಜಿಲ್ಲೆಯ ಮತ್ತೋರ್ವ ಎಂ.ಎಲ್.ಸಿ. ಬಿಜೆಪಿಯ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಬಿಜೆಪಿಯ ಕೆಲವು ಪ್ರಮುಖರು ಪಾಲ್ಗೊಂಡು ವೀಣಾ ಅಚ್ಚಯ್ಯ ಅವರಿಗೆ ಶುಭ ಕೋರಿದ್ದು ವಿಶೇಷವಾಗಿತ್ತು. ಮಡಿಕೇರಿ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಬೆಲ್ಲುಸೋಮಯ್ಯ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಶುಭ ಕೋರಿದ ಬಿಜೆಪಿಯ ಪ್ರಮುಖರಾಗಿದ್ದರು.
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಸಮಾಗಮ ಹಾಸ್ಯಭರಿತ ಮಾತಿನ ಗಂಭೀರ ಚರ್ಚೆ ಈ ಸಂದರ್ಭ ನೂತನ ಕಚೇರಿಯಲ್ಲಿ ಗಮನ ಸೆಳೆಯಲು ಚರ್ಚೆಯ ಪ್ರಮುಖ ವಿಚಾರ ಟಿಪ್ಪು ಜಯಂತಿಯದ್ದೇ ಆಗಿತ್ತು. ಬಿಜೆಪಿಯ ಸುನಿಲ್ ಸುಬ್ರಮಣಿ, ತಳೂರು ಕಿಶೋರ್ ಕುಮಾರ್, ಕಾಂಗ್ರೆಸ್‍ನ ಚಂದ್ರಕಲಾ, ಮಂಜುನಾಥ್ ಕುಮಾರ್ ಅವರುಗಳ ನಡುವೆ ಈ ಚರ್ಚೆ ಚರ್ಚಾ ಸ್ಪರ್ಧೆಯಂತೆ ನಡೆಯಿತು. ‘ಆಫ್ ದಿ ರೆಕಾರ್ಡ್' ಎಂದೇ ಕೆಲವು ಅಂಶಗಳು ಚರ್ಚೆಯಲ್ಲಿ ಕೇಳಿ ಬಂದಿತು. ತಳೂಕು ಕಿಶೋರ್ ಅವರು ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿ ಎಂದು ಕೇಳಿದರೆ ಚಂದ್ರಕಲಾ, ಸುಮಾವಸಂತ್ ಅವರುಗಳು ನಿಮ್ಮ ಕಾರ್ಯಕ್ರಮ ಏನಿರಬಹುದು ಎಂದು ಹಾಸ್ಯಭರಿತ ಪ್ರಶ್ನೆ ಹಾಕಿದರು. ಇವರ ನಡುವಿನ ಮಾತುಕತೆಯನ್ನು ವೀಣಾ ಅಚ್ಚಯ್ಯ ಅವರು ತಮ್ಮ ಆಸನದಲ್ಲಿ ಕುಳಿತು ಆಲಿಸುತ್ತಿದ್ದರು... ಆದರೆ ಅವರು ಏನೂ ‘ಕಮೆಂಟ್' ಮಾಡಲಿಲ್ಲ... ಸುಮಾವಸಂತ್ ಅವರು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿ ನೀವು ಚೆನ್ನಾಗಿ ಮಾತನಾಡುತ್ತೀರಾ... ಎಂದು ಸುನಿಲ್‍ಗೆ ಹೇಳಿದರೆ... ಅಯ್ಯೋ... ಬೇರೆ ಯಾರನ್ನಾದ್ರೂ ಒಪ್ಪಿಸಬಹುದು... ಆದರೆ ಆ ಸಿದ್ರಾಮಣ್ಣನ ಮಾತ್ರ ಆಗಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮೊದಲೇ ಸೆಕ್ಷನ್ ಹಾಕಿರುತ್ತಾರೆ... ಬಂಧನ - ಬಿಡುಗಡೆ ಎಲ್ಲವೂ ಆಗಬೇಕಲ್ಲವೇ ಎಂದು ಚಂದ್ರಕಲಾ ಹೇಳಿದರೆ, ಕೆ.ಕೆ. ಮಂಜುನಾಥ್ ವಾದಕ್ಕೆ ಸುನಿಲ್ ನೀವು ‘ಲಾಯರ್' ಆಗಬೇಕಿತ್ತು... ಆದರೆ ಮೇಷ್ಟ್ರು ಆಗಿದ್ದೀರಲ್ಲ! ಎಂದು ಹೇಳಿದರು. ಹಿಂದೂ ರಾಷ್ಟ್ರದಲ್ಲಿ ಹುಟ್ಟಿದ ಮೇಲೆ ಹಿಂದುತ್ವಕ್ಕೆ ಕಿಂಚಿತ್ತಾದರೂ ಗೌರವ ನೀಡಬೇಕಲ್ಲವೆ, ಟಿಪ್ಪು ಬದಲಾಗಿ ಅಬ್ದುಲ್ ಕಲಾಂ ಅಥವಾ ಬೇರೆ ಯಾವದಾದರೂ ಪ್ರಮುಖರ ಜಯಂತಿ ಆಚರಿಸಿ ನಾವು ಪ್ರಶ್ನಿಸುವದಿಲ್ಲ. ಇದರಿಂದ ಯಾರಿಗೆ ಏನು ಲಾಭವಿದೆ ಎಂಬಿತ್ಯಾದಿ ಚರ್ಚೆ ಯೊಂದಿಗೆ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದ ಸುನಿಲ್ ಹಾಗೂ ತಂಡ ಮತ್ತೊಮ್ಮೆ ವೀಣಾ ಅವರಿಗೆ ಶುಭ ಕೋರಿ ಹೊಸ ಕಚೇರಿಯಿಂದ ನಿರ್ಗಮಿಸಿದರು. ಸುನಿಲ್ ಸುಬ್ರಮಣಿ ಅವರು ಬಿಜೆಪಿಯವರಾಗಿ ಶುಭ ಕೋರಲು ಬಂದಿದ್ದ ಬಗ್ಗೆ ಚಂದ್ರಕಲಾ ‘ಬ್ರಾಡ್ ಮೈಂಡೆಡ್' ವ್ಯಕ್ತಿ ಎಂದು ಪ್ರಶಂಸಿಸಿದರೆ ಈ ಹಿಂದೆ ಅಪ್ಪಚ್ಚು ರಂಜನ್ ಅವರೂ ತಾವು ಸಚಿವರಾಗಿದ್ದಾಗ ಸಹಕರಿಸಿದ್ದಾರೆಂದು ಸುಮಾ ವಸಂತ್ ಸ್ಮರಿಸಿದರು.
ನಾನು ಸುನಿಲ್ ಸುಬ್ರಮಣಿ ಅವರ ಕಚೇರಿ ನೋಡಿಲ್ಲ. ಒಮ್ಮೆ ಹೋಗಬೇಕು ಎಂದು
ವೀಣಾ ಅಚ್ಚಯ್ಯ ಈ ಸಂದರ್ಭ ಹೇಳಿದರು. -ಶಶಿ.