ಮಡಿಕೇರಿ, ಡಿ.16 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡು ಬಡವರು ಹಾಗೂ ದಲಿತ ಕುಟುಂಬಗಳಿಗೆ ಹಂಚಬೇಕೆಂದು ಕಾವೇರಿ ಸೇನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ಸೇನೆಯ ಸಂಚಾಲಕ ಕೆ.ಎ. ರವಿಚಂಗಪ್ಪ ಕೋಟೆಕಾಡು ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಸಾಗುವಳಿ ಚೀಟಿಯೊಂದಿಗೆ ನೆಲೆ ನಿಂತಿರುವ ಬಡಕುಟುಂಬಗಳ ಜಾಗದ ಸರ್ವೆಗೆ ಕಂದಾಯ ಇಲಾಖೆ ಮುಂದಾಗಿದ್ದು, ಇದನ್ನು ವಿರೋಧಿಸಿ ತಾ.17 ರಂದು ಮಡಿಕೇರಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.
ಸುಮಾರು 12.84 ಎಕರೆಯಷ್ಟು ಜಾಗವನ್ನು ಅಕ್ರಮವಾಗಿ ಹೊಂದಿರುವ ಮಹಿಳೆಯೊಂದಿಗೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ದಲಿತ ಹಾಗೂ ಬಡಕುಟುಂಬಗಳಿಗೆ ನೋಟೀಸ್ ನೀಡಿ ತಾ.17 ರಂದು ಸರ್ವೆ ಕಾರ್ಯ ನಡೆಸುವದಾಗಿ ತಿಳಿಸಿದ್ದಾರೆ. ಇದು ಖಂಡನೀಯವಾಗಿದ್ದು, ಸಾಗುವಳಿ ಚೀಟಿ ಹೊಂದಿರುವ ಬಡವರ ಜಾಗವನ್ನು ಸರ್ವೆ ಮಾಡುವದನ್ನು ವಿರೋಧಿಸುವದಾಗಿ ತಿಳಿಸಿದರು. ಕಾನೂನಿನ ಪ್ರಕಾರ ಒಬ್ಬ ಅರ್ಜಿದಾರ 4.85 ಎಕರೆ ಜಾಗವನ್ನಷ್ಟೇ ಹೊಂದಲು ಅರ್ಹನಾಗಿರುತ್ತಾನೆ. ಆದರೆ ಕೋಟೆಕಾಡಿನಲ್ಲಿ ಕಾನೂನನ್ನು ಉಲ್ಲಂಘಿಸಿ 12.84 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಮಹಿಳೆಗೆ ನಿಯಮದಂತೆ 4.85 ಎಕರೆ ಜಾಗವನ್ನು ಮಾತ್ರ ನೀಡಿ ಉಳಿದ ಜಾಗವನ್ನು ಸರಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಮತ್ತು ದಿಡ್ಡಳ್ಳಿಯಲ್ಲಿ ಬೀದಿಪಾಲಾದ ಕುಟುಂಬಗಳಿಗೆ ಈ ಜಾಗವನ್ನು ಹಂಚಬೇಕು ಅಥವಾ ನವಗ್ರಾಮ ಯೋಜನೆಯಡಿ ವಸತಿ ನಿರ್ಮಿಸಿ ಬಡವರಿಗೆ ನೀಡಬೇಕೆಂದು ರವಿಚಂಗಪ್ಪ ಒತ್ತಾಯಿಸಿದರು.
ಕೋಟೆಕಾಡಿನಲ್ಲಿರುವ ಬಡವರ ಜಾಗವನ್ನು ಸರ್ವೆ ಮಾಡುವ ಕ್ರಮದಿಂದ ಅಧಿಕಾರಿಗಳು ಹಿಂದೆ ಸರಿಯದಿದ್ದಲ್ಲಿ ಮೊದಲ ಹಂತದಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಅಧಿಕಾರಿಗಳಿಂದ ನೋಟೀಸ್ ಪಡೆದಿರುವ ಕೋಟೆಕಾಡಿನ ನಿವಾಸಿಗಳಾದ ಲಲಿತ, ಕೆ.ಪಿ. ಕಮಲ, ಎನ್. ಕಮಲ, ಕೆ.ಪಿ. ಪ್ರಕಾಶ್ ಹಾಗೂ ಕಾವೇರಿ ಸೇನೆಯ ಸೋಮವಾರಪೇಟೆ ತಾಲ್ಲೂಕಿನ ಅಧ್ಯಕ್ಷ ಹೊಸಬೀಡು ಶಶಿ ಉಪಸ್ಥಿತರಿದ್ದರು.