ನಾಪೋಕ್ಲು, ಡಿ. 17: ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನೀಲ್ಯಾಟ್ ಶ್ರೀ ಶಾಸ್ತಾವು ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಶ್ರೀ ನೀಲ್ಯಾಟ್ ಸನ್ನಿಧಿಯಲ್ಲಿ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಒಟ್ಟು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹರಕೆ ಒಪ್ಪಿಸಿ ಆನಂತರ ಗ್ರಾಮದ ಶ್ರೀ ಭಗವತಿ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗ್ರಾಮಸ್ಥರು ಕೈಯಲ್ಲಿ ನವಿಲುಗರಿ, ಕತ್ತಿ, ಕೊಂಬು ಹಿಡಿದು ಪಡುವ (ಡೋಲು) ಬಡಿತಕ್ಕೆ ಲಯಬದ್ಧವಾಗಿ ಪೀಲಿಯಾಟ್, ತೇಲಾಟ್, ಕತ್ತಿಯಾಟ್, ಕೊಂಬಾಟ್ ಸೇರಿದಂತೆ 18 ವಿವಿಧ ನೃತ್ಯ ಪ್ರದರ್ಶಿಸಲಾಯಿತು.

ಈ ನೃತ್ಯವು ಶ್ರೀ ವಿಷ್ಣು ಮೋಹಿನಿಯ ಅವತಾರವನ್ನು ಧರಿಸಿ ಭಸ್ಮಾಸುರನನ್ನು ವಧಿಸಿದ ಪ್ರಸಂಗ ಎನ್ನಲಾಗಿದೆ. ಈ ಹಬ್ಬವು ನವೆಂಬರ್ 23 ರಂದು ದೇವರ ಕಟ್ಟಿನ ಮೂಲಕ ಪ್ರಾರಂಭಗೊಂಡಿತು. ಅಂದಿನಿಂದ ವಿವಿಧ ಕಾರ್ಯಕ್ರಮಗಳು ಜರುಗಿ ನಿನ್ನೆ ಮತ್ತು ಇಂದು ನಡೆದ ಪಟ್ಟಣಿ ಹಬ್ಬ ಆಚರಣೆಯೊಂದಿಗೆ ಉತ್ಸವ ಸಂಜೆ ಸಂಪನ್ನಗೊಂಡಿತ್ತು. ಪಟ್ಟಣಿ ಪ್ರಯುಕ್ತ ಭಕ್ತರಿಗೆ ಉಪಾಹಾರ ಏರ್ಪಡಿಸ ಲಾಗಿದ್ದು ನೃತ್ಯದ ಮುಂಬಾಟ್‍ಗಾರ (ಮುಂದಾಳು) ಚೇನಂಡ ಜಪ್ಪು ದೇವಯ್ಯನವರ ಮುಂದಾಳತ್ವದಲ್ಲಿ ನೃತ್ಯ ಜರುಗಿತು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಬಿದ್ದಂಡ ಎಂ. ಅಚ್ಚಯ್ಯ, ಕಾರ್ಯದರ್ಶಿ ಚೇನಂಡ ದೀನಾ ಚಂಗಪ್ಪ ಸೇರಿದಂತೆ ದೇವಾಲ ಯದ ಮತ್ತು ಊರಿನ ತಕ್ಕ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.