ಮಡಿಕೇರಿ, ಡಿ. 9: ದಕ್ಷಿಣ ಕೊಡಗಿನ ಕೊಂಗಣ ಹೊಳೆಯಲ್ಲಿ ಬರುವ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿಗೆ ಕೊಂಡೊ ಯ್ಯುವ ಯೋಜನೆಯೊಂದು ರೂಪಿತವಾಗುತ್ತಿದೆ. ಈಗಾಗಲೇ ಈ ಬಗ್ಗೆ ಸ್ಥಳ ಪರಿಶೀಲನೆಯೊಂದಿಗೆ ರೂಪು ರೇಷೆಯೂ ನಡೆದಿದೆ. ಈ ಯೋಜನೆಯ ಬಗ್ಗೆ ಸ್ಥಳೀಯವಾಗಿ ಯಾವದೇ ಹೆಚ್ಚಿನ ಮಾಹಿತಿ ಇಲ್ಲ. ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳು ಸ್ಥಳೀಯ ಗ್ರಾ.ಪಂ.ಗಳಿಗೂ ಸೂಕ್ತ ವಿವರ ಇಲ್ಲ. ಆದರೆ ಈ ಬಗ್ಗೆ ಪ್ರಕಟಿಸಿದವರು ನೆರೆಯ ಹುಣಸೂರಿನ ಶಾಸಕ ಹೆಚ್.ಪಿ. ಮಂಜುನಾಥ್ ಅವರು ಇತ್ತೀಚೆಗೆ ಹುಣಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು ಈ ಬಗ್ಗೆ ಪ್ರಕಟಿಸಿದ್ದಾರೆ.
ಕೊಲ್ಲಿತೋಡುವಿನಿಂದ ನೀರನ್ನು ಲಕ್ಷ್ಮಣತೀರ್ಥ ನದಿಗೆ ತಿರುಗಿಸಿ ಈ ಮೂಲಕ ಹುಣಸೂರಿನತ್ತ ನೀರು ಹರಿಸುವದು ಯೋಜನೆಯ ಉದ್ದೇಶವಾಗಿದೆ. ಪೊನ್ನಂಪೇಟೆಯ ಸಿ.ಐ.ಟಿ. ಕಾಲೇಜಿನಿಂದ 1 ಕಿ.ಮೀ. ದೂರದಲ್ಲಿ ಅರುವತೊಕ್ಕಲು ಗ್ರಾ.ಪಂ. ಸೇರಿರುವ ಕೊಲ್ಲಿತೋಡುವಿನಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಬೇಗೂರುಕೊಲ್ಲಿಯ ಮೂಲಕ ಲಕ್ಷ್ಮಣತೀರ್ಥ ನದಿಗೆ ನೀರನ್ನು ಸೇರಿಸುವ ಪ್ರಯತ್ನ ಇದಾಗಿದೆ. ಟಿ. ಶೆಟ್ಟಿಗೇರಿ, ಅರುವತೊಕ್ಕಲು, ಹುದಿಕೇರಿ ಗ್ರಾ.ಪಂ.ಗಳು ಈ ನದಿಯ ಯೋಜನೆಯ ವ್ಯಾಪ್ತಿಯಲ್ಲಿ ಬರಲಿವೆ.
ಪ್ರಸ್ತುತ ಕೊಲ್ಲಿತೋಡು ನೀರು ಅರ್ಧ ಕೊಂಗಣ ಹೊಳೆಗೆ, ಅರ್ಧ ಲಕ್ಷ್ಮಣತೀರ್ಥಕ್ಕೆ ಸೇರುತ್ತದೆ. ಈ ನಡುವೆ ಇರುವ ಹಳ್ಳ ಮುಚ್ಚಿದೆ. ಇದನ್ನು ಹಾಗೇ ಸರಿಪಡಿಸಿ ಕೇರಳಕ್ಕೆ ಹರಿದು ಹೋಗುತ್ತಿರುವ ಕೊಂಗಣ ಹೊಳೆ ನೀರನ್ನು ಕೊಲ್ಲಿತೋಡು ಹಳ್ಳದ ಮೂಲಕ ಲಕ್ಷ್ಮಣ ತೀರ್ಥಕ್ಕೆ ಸೇರಿಸುವದು ಈ ಯೋಜನೆಯಾಗಿದೆ. ಇಲ್ಲಿ ಯಾವದೇ ಗಿಡ-ಮರಗಳು ಇಲ್ಲ. ಭೂಸ್ವಾಧೀನ ಇಲ್ಲ. ನಿರುಪಯುಕ್ತವಾಗಿ ಹರಿಯುತ್ತಿರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ಬಳಸಿಕೊಳ್ಳುವ ಪ್ರಯತ್ನ ಇದಾಗಿದೆ. ಅಣೆಕಟ್ಟೆ ಅಥವಾ ಚೆಕ್ಡ್ಯಾಂ ನಿರ್ಮಿಸಲಾಗುವದಿಲ್ಲ. ಈ ವರ್ಷದ ಮಳೆಗಾಲದ ಪರಿಸ್ಥಿತಿಯಲ್ಲಿ ಇಲ್ಲಿಂದ 3 ಟಿ.ಎಂ.ಸಿ. ತನಕ ನೀರನ್ನು ಬಳಸಿಕೊಳ್ಳಬಹುದಾಗಿದೆ ಎಂದು ಶಾಸಕ ಹೆಚ್.ಪಿ. ಮಂಜುನಾಥ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಹಾರಂಗಿ ನೀರಾವರಿ ಇಲಾಖೆಯ ಹುಣಸೂರಿನ ಕಾರ್ಯಪಾಲಕ ಅಭಿಯಂತರ ಸುರೇಶ್ ‘ಶಕ್ತಿ'ಗೆ ಮಾಹಿತಿ ನೀಡಿದ್ದಾರೆ. ಅಂದಾಜು ರೂ. 20 ಕೋಟಿಯಲ್ಲಿ ಈ ಯೋಜನೆ ಕಾರ್ಯಗತ ಗೊಳಿಸಬಹುದು. ಈ ಹಿಂದೆ ಕೊಂಗಣದಿಂದ ಬೆಂಗಳೂರಿಗೆ ನೀರು ಕೊಂಡೊಯ್ಯಲು ಕ್ರಿಯಾ ಯೋಜನೆ ಸಿದ್ಧವಾಗಿತ್ತು.
(ಮೊದಲ ಪುಟದಿಂದ) ಇದೀಗ ಹುಣಸೂರಿಗೆ ನೀರು ಬಳಸಲು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಒಂದು ತಿಂಗಳ ಹಿಂದೆ ಹಾರಂಗಿ ನೀರಾವರಿ ಇಲಾಖೆಯ ಮೈಸೂರಿನ ಮುಖ್ಯ ಅಭಿಯಂತರ ಶಿವಶಂಕರ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಹಾಗೂ ಇತರರು ಕೊಲ್ಲಿತೋಡುವಿಗೆ ತೆರಳಿ ಪರಿಶೀಲನೆ ನಡೆಸಿರುವದಾಗಿ ಸುರೇಶ್ ಪತ್ರಿಕೆಗೆ ಖಚಿತಪಡಿಸಿದ್ದಾರೆ.
ಸ್ಥಳೀಯ ಶಾಸಕರ ವಿರೋಧ
ಹುಣಸೂರಿನಲ್ಲಿ ಕೊಲ್ಲಿತೋಡು ಯೋಜನೆ ಕುರಿತಾಗಿ ಅಲ್ಲಿನ ಶಾಸಕ ಹೆಚ್.ಪಿ. ಮಂಜುನಾಥ್ ಪ್ರಕಟಿಸಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಸ್ಥಳೀಯ ಶಾಸಕರುಗಳಿಗೆ ಯಾವದೇ ಮಾಹಿತಿ ಇಲ್ಲ. ಯೋಜನೆ ಕುರಿತಾಗಿ ತಮ್ಮೊಂದಿಗೆ ಚರ್ಚಿಸಿಯೇ ಇಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ. ಯೋಜನೆಗೆ ವೈಯಕ್ತಿಕವಾಗಿ ತಮ್ಮ ವಿರೋಧವಿದೆ. ಮೊದಲು ಜನಾಭಿಪ್ರಾಯ ಪಡೆಯಲಿ. ತಾವು ಜನರ ಭಾವನೆಯೊಂದಿಗೆ ಇರುವದಾಗಿ ಅವರು ತಿಳಿಸಿದರು. ಈ ಹಿಂದೆ ಕೊಂಗಣ ಯೋಜನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೊಂಗಣ ಯೋಜನೆಯನ್ನು ತಾವು ರದ್ದುಗೊಳಿಸಿದ್ದಾಗಿ ಅವರು ‘ಶಕ್ತಿ'ಯೊಂದಿಗೆ ಸ್ಮರಿಸಿದರು. ಹುಣಸೂರಿನ ಶಾಸಕರು ಇಲ್ಲಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಲಿ. ತಮ್ಮನ್ನು ಸಂಪರ್ಕಿಸಿದರೆ ಅವರಿಗೆ ಇದನ್ನೇ ಹೇಳುವೆ ಎಂದು ಬೋಪಯ್ಯ ತಿಳಿಸಿದರು.
ಸ್ಥಳೀಯ ಶಾಸಕರೂ ಕೂಡ ಸರಕಾರದ ಒಂದು ಭಾಗ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆಯದೆ ಯೋಜನೆ ರೂಪಿಸುವದು ಸರಿಯಲ್ಲ. ಈ ಯೋಜನೆಗೆ ತಮ್ಮ ವಿರೋಧವೂ ಇರುವದಾಗಿ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ಅರಿವಿಲ್ಲದೆ ಯೋಜನೆ ರೂಪಿಸುವದು ಸರಿಯಲ್ಲ. ಸಾಧಕ - ಬಾಧಕದ ಬಗ್ಗೆ ವಿವರ ತಿಳಿಸಬೇಕು. ಮಾತ್ರವಲ್ಲದೆ ಸ್ಥಳೀಯರ ಅಭಿಪ್ರಾಯವನ್ನೂ ಪಡೆಯಬೇಕಿದ್ದು, ಚರ್ಚೆ ನಡೆಸಲಿ ಎಂದು ಎಂಎಲ್ಸಿ ವೀಣಾ ಅಚ್ಚಯ್ಯ ತಮ್ಮ ನಿಲುವು ವ್ಯಕ್ತಪಡಿಸಿದರು.