*ಗೋಣಿಕೊಪ್ಪಲು, ಡಿ. 23: ಕೊಂಗಣ ಹೊಳೆ ಕೊಲ್ಲಿತೋಡು ಎಂಬಲ್ಲಿಂದ ಹುಣಸೂರು ತಾಲೂಕಿನತ್ತ ನೀರು ಹರಿಸುವ ಯೋಜನೆಯನ್ನು ವಿರೋಧಿಸುವದಾಗಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಸ್ಥಳೀಯ ಜನರಿಗೆ ಯಾವದೇ ಉಪಯೋಗವಿಲ್ಲ. ಸ್ಥಳೀಯ ಜನರಿಗೆ ನೀರಿನ ಅಭಾವ ಇದೆ. ಈ ನೀರನ್ನೇ ಜಿಲ್ಲೆಗೆ ಬಳಕೆಯಾಗುವಂತೆ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯ್ತಿ, ಶಾಸಕರು, ತಾ.ಪಂ. ಸದಸ್ಯರು, ಜಿ.ಪಂ. ಸದಸ್ಯರುಗಳ ಗಮನಕ್ಕೆ ತರದೆ ಯೋಜನೆಯನ್ನು ಕಾರ್ಯಗತಕ್ಕೆ ತರಲು ಸರ್ವೆ ಕಾರ್ಯಕ್ಕೆ ಮುಂದಾಗಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಯೋಜನೆಯ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಹಲವು ಮನವಿಯನ್ನು ನೀಡಿದ್ದಾರೆ. ಈ ಬಗ್ಗೆ ಜಿ.ಪಂ. ಸಭೆಯಲ್ಲಿ ಪ್ರಸ್ತಾಪಿಸುವದಾಗಿ ಈ ಸಂದರ್ಭ ತಿಳಿಸಿದರು.
ಗ್ರಾಮಸ್ಥರ ನಿಲುವಿಗೆ ವಿರುದ್ಧವಾಗಿ ಯಾವದೇ ಯೋಜನೆಯನ್ನು ರೂಪಿಸಲು ಸಾಧ್ಯವಿಲ್ಲ. ಜನರ ಅಭಿಪ್ರಾಯದ ಮೇಲೆ ಯೋಜನೆ ಕಾರ್ಯಗತಗೊಳ್ಳುವದು ನಿಂತಿದೆ.
ಕೊಲ್ಲಿತೋಡುವಿನಿಂದ ನೀರನ್ನು ಲಕ್ಷ್ಮಣ ತೀರ್ಥ ನದಿಗೆ ತಿರುಗಿಸಿ ಹುಣಸೂರಿನತ್ತ ನೀರು ಹರಿಸುವದು ಯೋಜನೆಯ ಮೂಲ ಉದ್ದೇಶವಾಗಿದೆ. ಇಲ್ಲಿನ ಪೊನ್ನಂಪೇಟೆಯ ಸಿ.ಐ.ಟಿ ಕಾಲೇಜಿನಿಂದ 1 ಕಿ.ಮೀ ದೂರದ ಅರುವತ್ತೋಕ್ಲು ಗ್ರಾ.ಪಂ. ಸೇರಿರುವ ಕೊಲ್ಲಿತೋಡುವಿನಿಂದ ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಬೇಗೂರುಕೊಲ್ಲಿ ಮೂಲಕ ಲಕ್ಷ್ಮಣ ತೀರ್ಥ ನದಿಗೆ ನೀರನ್ನು ಸೇರಿಸುವ ಪ್ರಯತ್ನ ಇದಾಗಿದೆ ಕೊಲ್ಲಿತೋಡು ನೀರು ಅರ್ಧ ಕೊಂಗಣ ಹೊಳೆಗೆ, ಅರ್ಧ ಲಕ್ಷ್ಮಣ ತೀರ್ಥಕ್ಕೆ ಸೇರುತ್ತದೆ. ಕೇರಳಕ್ಕೆ ಹರಿದು ಹೋಗುತ್ತಿರುವ ಕೊಂಗಣ ಹೊಳೆ ನೀರನ್ನು ಕೊಲ್ಲಿತೋಡು ಹಳ್ಳದ ಮೂಲಕ ಲಕ್ಷ್ಮಣ ತೀರ್ಥಕ್ಕೆ ಸೇರಿಸುವದು ಯೋಜನೆಯಾಗಿದೆ ಇದರಿಂದ ಸ್ಥಳೀಯರಿಗೆ ಯಾವದೇ ಉಪಯೋಗವಿಲ್ಲ ಎಂದು ಹೇಳಿದರು.
ಸಂದರ್ಭ ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಮಾಜಿ. ತಾ.ಪಂ. ಸದಸ್ಯ ಸಾಜಿ ಅಚ್ಯುತ್ತನ್ ಉಪಸ್ಥಿತರಿದ್ದರು.