ಸೋಮವಾರಪೇಟೆ,ಆ.26: ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಿ ಕೋಮುಗಲಭೆಗೆ ಪ್ರಚೋದಿಸುತ್ತಿರುವ ಪಿ.ಎಫ್.ಐ. ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕು. ಅಮಾಯಕ ಆಟೋ ಚಾಲಕನ ಹತ್ಯೆಗೈದಿರುವ ಕೊಲೆಗಡುಕ ರನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಬೇಕೆಂದು ಭಾರತೀಯ ಜನಪಾ ಪಾರ್ಟಿ ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಬಿಜೆಪಿ ತಾಲೂಕು ವಕ್ತಾರ ಕೆ.ಜಿ. ಸುರೇಶ್, ಆಗಸ್ಟ್ 14ರ ರಾತ್ರಿ ತಾಲೂಕಿನ ಗುಡ್ಡೆಹೊಸೂರು ಬಳಿ ಅಮಾನುಷ ವಾಗಿ ಹತ್ಯೆಗೀಡಾದ ಆಟೋ ಚಾಲಕ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ ದಲ್ಲಿ ಪಿ.ಎಫ್.ಐ. ಸಂಘಟನೆಯ ಕೈವಾಡವಿರುವದು ಸ್ಪಷ್ಟವಾಗಿ ತಿಳಿದುಬಂದಿದೆ ಎಂದರು.

ಈ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ, ಸೋಮವಾರಪೇಟೆ ಸಮೀಪದ ತಣ್ಣೀರುಹಳ್ಳದ ಹ್ಯಾರಿಸ್ ಎಂಬಾತನೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದರೊಂದಿಗೆ ಈತನ ಸಹಚರರು ಪಿಎಫ್‍ಐ ಸಂಘಟನೆಗೆ ಸೇರಿದವರೇ ಆಗಿದ್ದಾರೆ. ಆಗಸ್ಟ್ 14ರಂದು ರಾತ್ರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ಮಾರನೇ ದಿನ ಸೋಮವಾರಪೇಟೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ತನ್ನ ಸಹಚರರನ್ನು ಸೇರಿಸಿಕೊಂಡು ಕೋಮುಪ್ರಚೋದನೆಯ ಭಾಷಣ ಮಾಡಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಆಗ್ರಹಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಯಾಗಿದ್ದು, ಅನಗತ್ಯವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದ ಸುರೇಶ್, ಮುಂದೆ ಯಾವದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸ ಬಾರದು ಎಂದು ಒತ್ತಾಯಿಸಿದರು. ಇದೀಗ ಬಂಧಿತರಾಗಿರುವ ಆರೋಪಿಗಳನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ ಕೇವಲ ಒಂದು ವರ್ಗದ ಓಲೈಕೆಯಲ್ಲೇ ಮುಳುಗಿದೆ. ಸಾಮಾಜಿಕ ಸಾಮರಸ್ಯ ಕೆಡಿಸುವವರ ಪರವಾಗಿಯೇ ವಕಾಲತ್ತು ವಹಿಸುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಮಿಕ ಘಟಕದ ಮುಖಂಡ ವಿ.ಪಿ. ಶಶಿಧರ್, ಕೋಮುಗಲಭೆಗೆ ಬಿಜೆಪಿ ಹಾಗೂ ಸಂಘಪರಿವಾರವೇ ಕಾರಣ ಎಂದು ಹೇಳಿಕೆ ನೀಡಿ, ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ತನಿಖೆಯ ದಿಕ್ಕುತಪ್ಪಿಸಲು ಯತ್ನಿಸಿದ್ದರು. ಇದೀಗ ಬಂಧಿತರಾಗಿರುವ ಆರೋಪಿಗಳು ಬಿಜೆಪಿಗರಾ? ಅಥವಾ ಸಂಘ ಪರಿವಾರಕ್ಕೆ ಸೇರಿದವರಾ? ಎಂಬದನ್ನು ಶಶಿಧರ್ ಮನದಟ್ಟು ಮಾಡಿಕೊಳ್ಳಲಿ ಎಂದರು.

ಇರಾನ್, ಇರಾಕ್, ಸಿರಿಯಾದಲ್ಲಿ ಕತ್ತು ಸೀಳಿ ಕೊಲ್ಲುವಂತೆ ಇಂದು ಕೊಡಗಿನಲ್ಲಿ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲೆಯ ಜನರು ಜಾಗೃತಗೊಳ್ಳಬೇಕು. ಬಂದಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿ, ಇವರ ಹಿಂದಿರುವ ಕಾಣದ ಕೈಗಳನ್ನು ಹೊರಜಗತ್ತಿಗೆ ತೋರಿಸ ಬೇಕು. ಇದರೊಂದಿಗೆ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಮಸಗೋಡು ಗ್ರಾಮದ ಕೊಮಾರಿ ಸತೀಶ್ ಎಂಬವರ ಹತ್ಯೆ ಯತ್ನವೂ ನಡೆದಿದ್ದು, ಈ ತಂಡವೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಮೂಡಿದೆ. ಈ ಬಗ್ಗೆಯೂ ವಿಚಾರಣೆ ನಡೆಯ ಬೇಕು ಎಂದು ಒತ್ತಾಯಿಸಿದರು.

ಪ್ರವೀಣ್ ಪೂಜಾರಿ ಹತ್ಯೆಗೈದ ಆರೋಪಿಗಳನ್ನು ಬಂಧಿಸಿರುವ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಭಿನಂದನಾರ್ಹರು ಎಂದರು. ಪಕ್ಷದ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಮಾತನಾಡಿ, ಭಾರತದ ನೆಲದಲ್ಲಿ ಪಾಕಿಸ್ತಾನವನ್ನು ಹೊಗಳಿದ ರಮ್ಯ ಹೇಳಿಕೆ ಖಂಡನೀಯ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರ ಯುವ ಮೋರ್ಚಾ ಅಧ್ಯಕ್ಷ ಶರತ್, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು.