ಶನಿವಾರಸಂತೆ, ನ. 27: ಸಮೀಪದ ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ 42 ದಿನಗಳಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮ ಪಂಚಾಯಿತಿ ಹೇಮಾವತಿ ನದಿಯಿಂದ ನೀರು ಸರ ಬರಾಜು ಮಾಡುತ್ತಿತು. ಮೋಟಾರ್ ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಸಿದ್ದರೂ ಕಾರ್ಯನಿರ್ವಹಿಸದ ಕಾರಣ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಜನರ ಸಮಸ್ಯೆಗೆ ಸ್ಪಂದಿಸಿ ಕೊಡ್ಲಿಪೇಟೆಯ ಕೆಲಕೊಡ್ಲಿ ಗ್ರಾಮದ ಕೃಷಿಕ ಕೆ. ನಾಗೇಶ್ ತಮ್ಮ ಟ್ಯಾಂಕರ್‍ನಲ್ಲಿ ನೀರು ತುಂಬಿಸಿ ನಾಲ್ಕು ದಿನಗಳಿಂದ ಉಚಿತವಾಗಿ 45 ಸಾವಿರ ಲೀಟರ್ ನೀರು ಸರಬರಾಜು ಮಾಡುತ್ತಾ, ಮಾನವೀಯತೆ ಮೆರೆದಿದ್ದಾರೆ. ಸ್ನೇಹಿತರಾದ ಸಂಜು, ಹ್ಯಾರೀಶ್, ಜಾಬೀರ್, ಸಲೀಂ, ಸಿರಾಜ್ ಮತ್ತಿತರರು ಸಹಕಾರ ನೀಡುತ್ತಿದ್ದಾರೆ.

ಪಂಚಾಯಿತಿ ಆಡಳಿತ ಮಂಡಳಿಯಲ್ಲಿ 15 ಮಂದಿ ಸದಸ್ಯರಿದ್ದು, ಉಪಾಧ್ಯಕ್ಷ ವಿಜಯ್ ಮಾತ್ರ ಕೆ. ನಾಗೇಶ್ ಅವರ ಉಚಿತ ನೀರು ಸರಬರಾಜಿಗೆ ಸಹಕಾರ ನೀಡುತ್ತಿದ್ದಾರೆ. ಅಧ್ಯಕ್ಷರಾದಿಯಾಗಿ ಉಳಿದವರು ಯಾರೂ ಸ್ಪಂದಿಸುತ್ತಿಲ್ಲ ಎಂದು ಕೆಲ ನಾಗರಿಕರು ದೂರಿದ್ದಾರೆ.

ಪ್ರಾರಂಭದಲ್ಲಿ ಪಂಚಾಯಿತಿ ಸದಸ್ಯರೊಬ್ಬರೂ ಟ್ಯಾಂಕರ್‍ಗೆ ರೂ. 800 ರಂತೆ ಜನರಿಂದ ಹಣ ಪಡೆದು ನೀರು ಸರಬರಾಜು ಮಾಡುತ್ತಿದ್ದರು. ಇದರಿಂದ ಪಂಚಾಯಿತಿಗೆ ರೂ. 1,65,000 ಸಂಗ್ರಹವಾಗಿದ್ದರೂ ಯಾವದೇ ವ್ಯವಸ್ಥೆಯಾಗಿಲ್ಲ. ಹೊಸ ಮೋಟಾರ್ ಖರೀದಿಸಲು ಟೆಂಡರ್ ಕರೆಯಲಾಗಿದ್ದರೂ ಕಡಿಮೆ ಹಣ ತೋರಿಸಿ ಅರ್ಜಿ ಹಾಕಿದ್ದ ಟೆಂಡರ್‍ಗಳನ್ನು ತಿರಸ್ಕರಿಸಲಾಗಿದೆ.

ಜೈ ಕರ್ನಾಟಕ ಸಂಘದಿಂದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೂ, ಪಿಡಿಓ ಧನಂಜಯ್ ಉತ್ತರಿಸುತ್ತಿಲ್ಲ. ಮಾಹಿತಿ ಹಕ್ಕು ಸಂಸ್ಥೆಗೂ ಮನವಿ ಸಲ್ಲಿಸಿದ್ದೇವೆ ಎಂದು ಸಂಘದ ನಗರಾಧ್ಯಕ್ಷ ಸಂಜು ಹೇಳಿದರು.