ಸೋಮವಾರಪೇಟೆ,11: ಬಿಜೆಪಿಯ ಬರ ಪರಿಸ್ಥಿತಿ ಅಧ್ಯಯನ ಸಮಿತಿಯ ಪದಾಧಿಕಾರಿಗಳು ಬರದಿಂದ ಅತಿ ಹೆಚ್ಚು ಬೆಳೆಹಾನಿಗೊಳಗಾದ ತಾಲೂಕಿನ ಕೊಡ್ಲಿಪೇಟೆ ಮತ್ತು ಕುಶಾಲನಗರ ಹೋಬಳಿಯ ಕೆಲ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದರು.ಪಕ್ಷದ ಜಿಲ್ಲಾ ಕೃಷಿ ಮೋರ್ಚಾ ಸಮಿತಿ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ತಾಲೂಕು ಅಧ್ಯಕ್ಷ ರವಿ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾಪಂ. ಸದಸ್ಯರಾದ ಕುಶಾಲಪ್ಪ, ಎಚ್. ತಂಗಮ್ಮ, ಜಿಪಂ ಕೃಷಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಡಿ.ಧರ್ಮಪ್ಪ ಅವರುಗಳು ಸಮಿತಿ ಪದಾಧಿಕಾರಿಗಳಿಗೆ ತಾಲೂಕಿನಲ್ಲಿ ಬೆಳೆಹಾನಿಯ ಬಗ್ಗೆ ಮಾಹಿತಿ ನೀಡಿದರು.

ಮಳೆಯಿಲ್ಲದೆ ಪೂರ್ಣ ಪ್ರಮಾಣದಲ್ಲಿ ಬತ್ತಿರುವ ಕೊಡ್ಲಿಪೇಟೆ ಸಮೀಪದ ನಿಲುವಾಗಿಲು ಎಣ್ಣೆ ಕೆರೆ, ಬೆಸೂರು ಕೆರೆ, ಮಾಲಂಬಿ ಕೆರೆ, ಆಲೂರು ಕೆರೆ, ಅಳಿಲು ಗುಪ್ಪೆ ಕೆರೆಗಳನ್ನು ವೀಕ್ಷಿಸಿದರು. ನಂತರ ತೊರೆನೂರು, ಹೆಬ್ಬಾಲೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಭತ್ತ ಫಸಲು ಹಾನಿಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಸಮಿತಿಯ ಸದಸ್ಯರು ಹಾಗು ಪಕ್ಷದ ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ಶಿವಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 139 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಆದರೆ ಬರ ನಿರ್ವಹಣೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಅಧಿಕಾರಿಗಳು ಕೂಡ ಸ್ಥಳಪರಿಶೀಲನೆ ಮಾಡಿ ರೈತರ ಸಹಾಯಕ್ಕೆ ನಿಲ್ಲುತ್ತಿಲ್ಲ. ಈ ಕಾರಣದಿಂದ ಬಿಜೆಪಿ ರಾಜ್ಯದಲ್ಲಿ 10 ಬರ ಅಧ್ಯಯನ ತಂಡಗಳನ್ನು ರಚಿಸಿದೆ. ಬರದ ವಾಸ್ತವಿಕ ಪರಿಸ್ಥಿತಿಯನ್ನು ರಾಜ್ಯಕ್ಕೆ ಹಾಗು ಕೇಂದ್ರಕ್ಕೆ ಸಲ್ಲಿಸಲಾಗುವದು ಎಂದರು.

ಕಳೆದ ಬಾರಿ ಬಿಜೆಪಿ ಬರ ಅಧ್ಯಯನದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1504 ಕೋಟಿ ರೂ.ಗಳ ಅನುದಾನ ಕಲ್ಪಿಸಿತ್ತು. ಆದರೆ ರಾಜ್ಯ ಸರ್ಕಾರ ಅತ್ಯಂತÀ ನಿರ್ಲಕ್ಷದಿಂದ ರೈತರ ಖಾತೆಗೆ ಹಣ ಜಮೆ ಮಾಡಿಲ್ಲ ಎಂದು ದೂರಿದರು.

ಡಿ.25ರ ಒಳಗೆ 10 ತಂಡಗಳು ವರದಿಯನ್ನು ಸಲ್ಲಿಸಲಿವೆ. ಕೇಂದ್ರ ಸರ್ಕಾರ ಕೂಡ ಈ ಬಾರಿಯೂ ಹೆಚ್ಚಿನ ಹಣವನ್ನು ರಾಜ್ಯದಲ್ಲಿ ಬರನಿರ್ವಹಣೆಗೆ ಕಲ್ಪಿಸಲಿದೆ ಎಂದರು. ಜಿಲ್ಲೆಯ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿದೆ. ಘೋಷಣೆ ಮಾಡಿದರೆ ಪರಿಹಾರ ಸಿಗೋದಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಬೆಳೆನಷ್ಟ ಮಾಹಿತಿಯ ವರದಿ ನೀಡಿದರೆ ಪ್ರಯೋಜನವಿಲ್ಲ. ಸರ್ಕಾರ ಬೆಳೆಹಾನಿ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಿತಿಯಲ್ಲಿ ರೈತಮೋರ್ಚಾದ ರಾಜ್ಯ ಕಾರ್ಯದರ್ಶಿ ರೇಣು ಕುಮಾರ್ ಇದ್ದರು.