ಸೋಮವಾರಪೇಟೆ,ಅ.18: ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ವೀರಶೈವರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ವೀರಶೈವರ ಸಮಾಗಮಕ್ಕೆ ರಾಜ್ಯಮಟ್ಟದ ನಾಯಕರುಗಳು ಸಾಕ್ಷಿಯಾದರು. ಆಡಳಿತ ಮತ್ತು ವಿಪಕ್ಷಗಳ ರಾಜಕೀಯ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ವೀರಶೈವ ಸಮಾಜ ಬಾಂಧವರು ಉಪಸ್ಥಿತರಿದ್ದರು.
ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿ ಮಠದ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೃಹತ್ ಕಾರ್ಯಕ್ರಮ ಜಿಲ್ಲೆಯ ವೀರಶೈವ ಸಮುದಾಯವನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿ ಯಾಯಿತು.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜೀ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಭಾರತ ಆಧ್ಯಾತ್ಮಿಕ ಚಿಂತನೆಯಲ್ಲಿ ಜಗತ್ತಿಗೆ ಶ್ರೀಮಂತ ದೇಶವಾಗಿದೆ. ಆಧ್ಯಾತ್ಮಿಕತೆಗೆ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ. ಅದೇರೀತಿಯಲ್ಲಿ ವೀರಶೈವ ಸಮಾಜ ಸಾಮಾಜಿಕ ಮೌಲ್ಯ, ಸಮಾಜದಲ್ಲಿರುವ ಇತರ ಸಮುದಾಯವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ ಎಂದರು.
ಭಾರತ ದೇಶದಲ್ಲಿ ಆಧ್ಯಾತ್ಮಿಕ ಚಿಂತಕರು, ಸಂಸ್ಕøತಿ, ಸಹನಾ ಮನೋಭಾವನೆ, ಸಾಧಕರು, ಮೇಧಾವಿಗಳಿದ್ದು ಇದರಿಂದ ವಿಶ್ವದಲ್ಲಿರುವ ಇತರ ದೇಶಗಳೂ ಸಹ ನಮ್ಮತ್ತ ನೋಡುತ್ತಿವೆ. ವಿದ್ಯಾಕ್ಷೇತ್ರದಲ್ಲಿ ವೀರಶೈವ ಸಮಾಜ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರು.
ದೇಶಕ್ಕೆ ಅಸಂಖ್ಯಾತ ಸೈನಿಕರನ್ನು ಕೊಟ್ಟ ಕೊಡಗು ದೇಶದ ಇತರ ಭಾಗಗಳಿಂತಲೂ ವೈಶಿಷ್ಟ್ಯ ಪೂರ್ಣವಾಗಿದೆ. ವೀರಶೈವ ರಾಜರು ಆಳ್ವಿಕೆ ನಡೆಸಿರುವದರಿಂದ ಐತಿಹಾಸಿಕ ವಾಗಿಯೂ ಶ್ರೀಮಂತವಾಗಿದೆ. ಪ್ರಸ್ತುತ ವರ್ಷ ಬರಗಾಲದ ಬೇಗೆ ಕೊಡಗು ಜಿಲ್ಲೆಯನ್ನೂ ತಟ್ಟಿದೆ. ಕೊಡಗಿನ 2 ತಾಲೂಕುಗಳನ್ನು ಮಾತ್ರ ಸರ್ಕಾರ ಬರಗಾಲ ಪೀಡಿತ ಎಂದು ಘೋಷಿಸಿದ್ದು, ಬರದ ಭೀಕರತೆಯಿರುವ ಸೋಮವಾರಪೇಟೆಯನ್ನು ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಈ ತಾಲೂಕನ್ನು ಸಹ ಬರಗಾಲ ಪ್ರದೇಶ ಎಂದು ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
(ಮೊದಲ ಪುಟದಿಂದ) ಕೇಂದ್ರ ಸರಕಾರ ನಮ್ಮ ರಾಜ್ಯದ ಬರಗಾಲ ಸಮಸ್ಯೆ ಸೇರಿದಂತೆ ಕಾವೇರಿ ಮತ್ತು ಮಹದಾಯಿ ಸಮಸ್ಯೆಗಳಿಗೆ ಅಗತ್ಯ ಸಹಕಾರ ನೀಡುತ್ತದೆ. ಈ ಸಮಸ್ಯೆಗಳ ಬಗ್ಗೆ ತಾನು ಪ್ರಧಾನಿ ನರೇಂದ್ರಮೋದಿ ಅವರಲ್ಲೂ ಮಾತುಕತೆ ನಡೆಸುತ್ತೇನೆ. ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜ್ಯ ಪೌರಾಡಳಿತ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮಾತನಾಡಿ, ವೀರಶೈವ ಧರ್ಮ ಇಡೀ ವಿಶ್ವಕ್ಕೆ ತನ್ನದೆಯಾದ ಸಾಮಾಜಿಕ ಮೌಲ್ಯ, ಸಮಾನತೆ, ತತ್ವ-ಸಿದ್ದಾಂತಗಳ ಚಿಂತನೆ ಹಾಗೂ ವೈಚಾರಿಕತೆಯ ಕೊಡುಗೆಯನ್ನು ನೀಡಿದ ಐತಿಹಾಸಿಕ ಮತ್ತು ಸಾಮಾಜಿಕ ಧರ್ಮವಾಗಿದೆ ಎಂದು ಬಣ್ಣಿಸಿದರು.
ವೀರಶೈವ ಧರ್ಮ ಬಸವಣ್ಣ ನವರು ಸಾರಿದ ಸಿದ್ದಾಂತಗಳ ನೆಲೆಗಟ್ಟಿನಲ್ಲಿ ತನ್ನದೆಯಾದ ಕಾಯಕವನ್ನು ಮಾಡುತ್ತಿದೆ. ವಚನ ಸಾಹಿತ್ಯಗಳ ಮೂಲಕ ಸಮಾಜ ದಲ್ಲಿರುವ ಮೌಢ್ಯಗಳು, ಸಮಾನತೆ, ವೈಚಾರಿಕತೆ ಮುಂತಾದ ಚಿಂತನೆಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಏಕೈಕ ಧರ್ಮವಾಗಿದೆ ಎಂದರು.
ಯಾವದೇ ಒಂದು ಸಮಾಜ ಆಧುನಿಕತೆಗೆ ಬದಲಾಗುವದು ಸಹಜ; ಆದರೆ ವೀರಶೈವ ಸಮಾಜ ಆಧುನಿಕತೆಗೆ ಹೊಂದಿಕೊಂಡು ವೈಚಾರಿಕತೆಯ ಬದಲಾವಣೆಯ ಜೊತೆಯಲ್ಲಿ ವೈಜ್ಞಾನಿಕ, ಶೈಕ್ಷಣಿಕ ವಾಗಿಯೂ ಅಭಿವೃದ್ಧಿ ಸಾಧಿಸಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ವೀರಶೈವ ಲಿಂಗಾಯಿತ ಸಮೂದಾಯವನ್ನು ಬಲಪಡಿಸಲು ಪ್ರಯತ್ನಿಸಬೇಕು. ವೀರಶೈವ ಸಮಾಜ ಬಡ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು. ವೀರಶೈವ ಸಮಾಜದ ಯುವಕ-ಯುವತಿಯರು ಪಾಶ್ಚಿಮಾತ್ಯ ಸಂಸ್ಕøತಿಗೆ ಒಳಗಾಗದೆ ತಮ್ಮ ಧರ್ಮ, ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ವೀರಶೈವ ಸಮಾಜ ಬಾಂಧವರ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಸಮುದಾಯ ಬಾಂಧವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ವೀರಶೈವ ಮಹಾಸಭಾವನ್ನು ಸ್ಥಾಪಿಸಲಾಗಿದೆ ಅಲ್ಲದೆ ವೀರಶೈವ ಸಮಾಜದ ಬಡವರ್ಗದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದಾವಣಗೆರೆ ಯಲ್ಲಿ ಶಾಮನೂರು ಶಿವಶಂಕರಪ್ಪ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದರು.
ಒಟ್ಟು 12 ಕೋಟಿಯನ್ನು ಟ್ರಸ್ಟ್ನಲ್ಲಿ ವಿನಿಯೋಗಿಸಿ ರಾಜ್ಯದಲ್ಲಿ ವೀರಶೈವ ಬಾಂಧವರ ಶಿಕ್ಷಣ, ವಸತಿ ಸೌಲಭ್ಯ, ಇಂಜಿನಿಯರ್, ಮೆಡಿಕಲ್ ಶಿಕ್ಷಣ ಮತ್ತು ಇತರ ಸಹಾಯಕ್ಕಾಗಿ ನೆರವು ನೀಡುತ್ತಿದೆ. ಇದರಲ್ಲಿ 2 ಕೋಟಿ ರೂ. ಹಣದಲ್ಲಿ ರಾಜ್ಯದಲ್ಲಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳಿಗೆ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ನೆರವು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ವೀರಶೈವ ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕøತಿಕ ಭವನ ನಿರ್ಮಿಸಲು ಮಹಾಸಭಾ ನಿರ್ಣಯಿ ಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕ ಸಹಕಾರ ನೀಡಬೇಕಾಗಿದೆ ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಮಾತನಾಡಿ, ಕೊಡಗು ಜಿಲ್ಲೆ 16ನೇ ಶತಮಾನದ ಹಿಂದಿನ ಇತಿಹಾಸವನ್ನು ಹೊಂದಿದೆ. 16 ನೇ ಶತಮಾನದಲ್ಲಿ ವೀರಶೈವ ಸಮಾಜದ ಹಾಲೇರಿ ವಂಶಸ್ಥರು ಆಳ್ವಿಕೆ ನಡೆಸುವದರ ಮೂಲಕ ವೀರಶೈವ ಸಮಾಜದ ಉದ್ದಾರಕ್ಕಾಗಿ ನಾಂದಿ ಹಾಡಿದರು. 1586 ರಿಂದ 1806 ತನಕ ಕೊಡಗಿನ ರಾಜರು ಆಳ್ವಿಕೆ ನಡೆಸಿರುವ ಕುರುಹು ಒಳಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವೀರಶೈವ ಸಮಾಜದ ಉದ್ದಾರಕ್ಕಾಗಿ ಜಿಲ್ಲೆಯಲ್ಲಿರುವ ವೀರಶೈವ ರಾಜರ ಅರಮನೆ, ರಾಜರ ಸ್ಮಾರಕಗಳನ್ನು ಜೀರ್ಣೋದ್ದಾರ ಮಾಡಬೇಕಾಗಿದೆ. ವೀರಶೈವ ಸಮಾಜದ ಬಾಂಧವರಿಗಾಗಿ ಕೇಂದ್ರ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕೆಂದು ಸರಕಾರ ವನ್ನು ಒತ್ತಾಯಿಸಿದರು.
ಮಹಾಸಭಾದ ರಾಜ್ಯ ಕಾರ್ಯದರ್ಶಿ ಬಿ.ಎಸ್.ವಾಗೀಶ್ಪ್ರಸಾದ್, ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ, ಉಚ್ಚನ್ಯಾಯಾಲಯದ ನಿವೃತ್ತ ಸರಕಾರಿ ಅಭಿಯೋಜಕ ಎಚ್.ಎಸ್. ಚಂದ್ರಮೌಳಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ವಿವಿಧ ಮಠಗಳ ಮಠಾಧೀಶರು, ಕೇಂದ್ರ ಮಹಿಳಾ ಘಟಕದ ಗೀತಾ ಜಯಂತ್, ಸುವರ್ಣ ಚಿನ್ನಣ್ಣ, ಪ್ರಮುಖರಾದ ಉಷಾ ತೇಜಶ್ವಿ, ಬಿ.ಕೆ.ಯತೀಶ್, ಕೆ.ಎನ್.ಸಂದೀಪ್. ಸಿ.ವಿ.ವಿಶ್ವನಾಥ್, ವರಪ್ರಸಾದ್, ಎಸ್.ಮಹೇಶ್, ಕಾಂತರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.