ಶ್ರೀಮಂಗಲ, ಜ. 30 : ಕೊಡವ ಭಾಷೆ ಹಾಗೂ ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಹಿರಿಯರ ಕೊಡುಗೆ ಅಪಾರವಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಕಿರಿಯರ ಜವಾಬ್ದಾರಿ ಕೂಡ ಅಷ್ಟೇ ಮುಖ್ಯವಾಗಿದೆ. ಸ್ಥಳೀಯ ಭಾಷೆ ಸಂಸ್ಕøತಿಯತ್ತ ನಿರ್ಲಕ್ಷ್ಯ ಬೆಳೆಸಿಕೊಂಡು ಪಾಶ್ಚಾತ್ಯ ಭಾಷೆ, ಸಂಸ್ಕøತಿಯತ್ತ ಯುವ ಸಮುದಾಯ ವಾಲುತ್ತಿರುವದು ಸಹ ಕಂಡುಬರುತ್ತಿದೆ. ಆದರೆ ಇದಕ್ಕೆ ಹೊರತಾಗಿ ಬಹಳಷ್ಟು ಯುವ ಸಮುದಾಯ ದೇಶೀಯ ಸಂಸ್ಕøತಿ, ಭಾಷೆ, ಸಾಹಿತ್ಯ-ಸಂಗೀತದತ್ತ ಅಭಿಮಾನ ಬೆಳೆಸಿಕೊಂಡಿದೆ. ಈ ನಿಟ್ಟಿನಲ್ಲಿ ಕೊಡವ ಭಾಷೆ ಹಾಗೂ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಲು ಯುವ ವಿದ್ಯಾರ್ಥಿಗಳ ತಂಡ ತೊಡಗಿಸಿಕೊಂಡಿದೆ.

ವಿದ್ಯಾರ್ಥಿ ಜೀವನದಲ್ಲೇ ಕೊಡವ ಭಾಷೆ ಸಾಹಿತ್ಯದತ್ತ ಅಭಿಮಾನ ಮೂಡಿಸಿಕೊಂಡು, ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೊಡವ ಸಾಹಿತ್ಯ, ಸಂಗೀತ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಯುವ ತಂಡ ‘ಪೀಚೆ ಕತ್ತಿ’ ಹೆಸರಿನಲ್ಲಿ ಕೊಡವ ಭಾಷೆಯ ಹಾಡಿನ ಸಿ.ಡಿ. ಹೊರತರಲು ಮುಂದಾಗಿದೆ. ‘ಪೀಚೆ ಕತ್ತಿ’ ತಂಡದ ಸಂಚಾಲಕಿ ಪೊನ್ನೋಲತಂಡ ರೀಮಾ ಕುಶಾಲಪ್ಪ, ಬುಟ್ಟಿಯಂಡ ಲಿಖಿತಾ, ಮುದ್ದಿಯಡ ಕರಣ್ ಕಾವೇರಪ್ಪ, ನಾಯಕಂಡ ಸೋಮಣ್ಣ ಸಿ.ಡಿ.ಗೆ ಕಂಠದಾನ ಮಾಡಲಿದ್ದಾರೆ. ಮಾಳೆಯಂಡ ಗೌರವ್ ಗಣಪತಿ, ಐತಿಚಂಡ ರಿಕಿನ್ ಉತ್ತಪ್ಪ ಸಾಹಿತ್ಯ ಬರೆದಿದ್ದು, ಸಿ.ಡಿಯಲ್ಲಿ ಒಟ್ಟು 10 ಹಾಡುಗಳು ಇರಲಿವೆ. ಈ ಸಿ.ಡಿಯ ಕೆಲವು ಹಾಡಿಗೆ ಕೊಡಗಿನ ಹೆಸರಾಂತ ಸಾಹಿತಿಗಳ ಸಾಹಿತ್ಯವನ್ನು ಬಳಸಿಕೊಳ್ಳಲಾಗುವದು ಎಂದು ತಂಡದ ಸಂಚಾಲಕಿ ರೀಮಾ ಕುಶಾಲಪ್ಪ ತಿಳಿಸಿದ್ದಾರೆ.

ಈ ತಂಡ ಈಗಾಗಲೇ ಪೀಚೆಕತ್ತಿ ಕೊಡವ ಹಾಡಿನ ಸಿ.ಡಿ.ಗೆ ಸಾಹಿತ್ಯ ಅಂತಿಮಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಯುವ ಸಮುದಾಯ ಆಕರ್ಷಿತರಾಗುತ್ತಿದ್ದು, ಹಳೆಯ ಬೇರಿಗೊಂದು ಹೊಸ ಚಿಗುರು ಎಂಬಂತೆ ಇಂದಿನ ಯುವ ಪೀಳಿಗೆ ಹಾಗೂ ಹಿರಿಯರಿಗೂ ಇಷ್ಟವಾಗು ವಂತಹ ಕೊಡಗಿನ ಹಿರಿಮೆಯ ಹಾಗೂ ವಿದ್ಯಮಾನಕ್ಕೆ ಅನುಸಾರವಾಗಿ ಆಡಿಯೋ ಸಿ.ಡಿ.ಯ ಸಾಹಿತ್ಯ ರಚನೆ ಮಾಡಲಾಗಿದೆ ಎಂದು ಸಂಚಾಲಕಿ ರೀಮಾ ಕುಶಾಲಪ್ಪ ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ನಾಪೋಕ್ಲುವಿನಲ್ಲಿ ನಡೆಯಲಿರುವ ಕೊಡವ ಹಾಕಿ ನಮ್ಮೆಯಲ್ಲಿ ಸಿ.ಡಿ. ಬಿಡುಗಡೆ ಮಾಡಲು ಯೋಚಿಸಿದ್ದು, ಈ ಸಿ.ಡಿ. ತಯಾರಿಕೆಗೆ ಸುಮಾರು 2 ಲಕ್ಷ ವೆಚ್ಚ ತಗುಲಲಿದೆ. ಕಾಲೇಜು ವಿದ್ಯಾರ್ಥಿಗಳಾದ ನಮ್ಮ ತಂಡ ಒಂದುಗೂಡಿ ಈ ಕಾರ್ಯಕ್ಕೆ ಕೈಹಾಕಿದ್ದು, 2 ಸಾವಿರ ಸಿ.ಡಿ.ಯನ್ನು ಹೊರತರಲು ಬಯಸಿದ್ದೇವೆ ಎಂದು ತಂಡದ ಸಂಚಾಲಕಿ ರೀಮಾ ಕುಶಾಲಪ್ಪ ಮಾಹಿತಿ ನೀಡಿದರು.

ಹೀಗಾಗಲೇ ‘ಬೊಟ್ಟ್‍ಪೊಡಿಯ’ ಎಂಬ ಕೊಡವ ಹಾಡಿನ ಸಿ.ಡಿ.ಯನ್ನು ಹೊರತಂದ ಅನುಭವ ಈ ತಂಡಕ್ಕಿದೆ. ‘ಬೊಟ್ಟ್‍ಪೊಡಿಯ’ ಸಿ.ಡಿ.ಯಲ್ಲಿ ರೀಮಾ ಕುಶಾಲಪ್ಪ ಹಾಡು ಹಾಡಿದ್ದಾರೆ. ಇದರೊಂದಿಗೆ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಕಾಣಿಕೆ ನೀಡಿ, ಸೇವೆ ಸಲ್ಲಿಸಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಕಾಲಿಕವಾಗಿ ನಿಧನರಾದ ಮುದ್ದಿಯಡ ಕುಶ ಅವರ ಮಗ ಮುದ್ದಿಯಡ ಕರಣ್ ಕಾವೇರಪ್ಪ ಸಹ ತಂದೆಯಂತೆ ಚಿಕ್ಕ ವಯಸ್ಸಿನಲ್ಲಿಯೇ ಕೊಡವ ಭಾಷೆ ಸಾಹಿತ್ಯಕ್ಕೆ ತನ್ನ ಕೊಡುಗೆ ನೀಡಲು ಇಲ್ಲಿ ಮುಂದಾಗಿರುವದು ವಿಶೇಷ.

ಆದರೆ ಆರ್ಥಿಕವಾಗಿ ಮುಗ್ಗಟ್ಟು ಕಾಡುತ್ತಿದ್ದು, ಸಾಹಿತ್ಯ ಅಭಿಮಾನಿಗಳು ಧನ ಸಹಾಯ ನೀಡಬೇಕಿದೆ ಎಂದು ಅವರು ಕೇಳಿಕೊಂಡಿದ್ದಾರೆ. ಧನ ಸಹಾಯವನ್ನು ಡಿ.ಡಿ. ಅಥವಾ ಚೆಕ್ ಮೂಲಕ ಕಳುಹಿಸುವವರು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಬೇಕಾಗಿ ಮನವಿ ಮಾಡಿದ್ದಾರೆ. ಮುದ್ದಿಯಡ ಕರಣ್ ಕಾವೇರಪ್ಪ, ನಿಸರ್ಗ ಲೇಔಟ್, ಪಂಜರಪೇಟೆ, ವೀರಾಜಪೇಟೆ-571218. ಸಂಪರ್ಕಿಸುವವರು ದೂರವಾಣಿ-9741008219, 9449419423, 9663949488 ಮೂಲಕ ಸಂಪರ್ಕಿಸಬಹುದು.