ಮಡಿಕೇರಿ, ಅ.18 : ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಮಡಿಕೇರಿ ಕೊಡವ ಸಮಾಜದ ಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಟೀಕಿಸಿದ್ದಾರೆ. ಕೊಡವ ಸಮಾಜಗಳು ಸಮಾಜಕ್ಕೆ ಸಂಬಂಧಿಸಿದ ಕೆಲಸ ಮಾಡಬೇಕೇ ಹೊರತು ಬಿಜೆಪಿಯ ಬ್ರ್ಯಾಂಚ್ ಆಫೀಸ್‍ನಂತೆ ಕಾರ್ಯನಿರ್ವಹಿಸುವದು ಸರಿಯಲ್ಲವೆಂದು ಅವರು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಕೆ.ಸುಬ್ಬಯ್ಯ, ಟಿಪ್ಪು ಜಯಂತಿಯನ್ನು ವಿರೋಧಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಮಡಿಕೇರಿ ಕೊಡವ ಸಮಾಜ ಬಿಜೆಪಿಯ ಬ್ರ್ಯಾಂಚ್ ಆಫೀಸ್‍ನಂತೆ ವರ್ತಿಸಿದೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ ಆಚರಿಸಬೇಕು ಎನ್ನುವದು ಕಾಂಗ್ರೆಸ್ ಸರಕಾರದ ಅಜೆಂಡಾವಾದರೆ, ಇದನ್ನು ವಿರೋಧಿಸುವದು ಬಿಜೆಪಿಯ ಅಜೆಂಡಾವಾಗಿದೆ. ಪರಿಸ್ಥಿತಿ ಹೀಗಿರುವಾಗ ಕೊಡವ ಸಮಾಜ ಮತ್ತು ಕೊಡವ ಮೂಲಭೂತ ವಾದಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವದು ಕೊಡವ ಸಮುದಾಯಕ್ಕೆ ತೋರಿದ ಅಗೌರವವಾಗಿದೆ. ಸ್ವಂತ ಬುದ್ಧಿಯ ಮೂಲಕ ಪ್ರಬುದ್ಧತೆಯನ್ನು ಮೆರೆಯಬೇಕಾಗಿದ್ದ ಕೊಡವ ಸಮಾಜ ಕೊಡವರ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಸುಬ್ಬಯ್ಯ ಆರೋಪಿಸಿದರು.

ಬಿಜೆಪಿ ಮತ್ತು ಸಂಘ ಪರಿವಾರ ದೇವಟ್‍ಪರಂಬು ಎನ್ನುವ ಸುಳ್ಳನ್ನು ಸೃಷ್ಟಿಸಿವೆ. ಇತಿಹಾಸವನ್ನು ಅಧ್ಯಯನ ಮಾಡಿದರೆ ದೇವಟ್‍ಪರಂಬು ಪ್ರದೇಶ ಅಥವಾ ಅಲ್ಲಿ ಹತ್ಯೆ ನಡೆದಿರುವ ಬಗ್ಗೆ ಯಾವದೇ ಸಾಕ್ಷ್ಯಗಳಿಲ್ಲವೆಂದು ಅಭಿಪ್ರಾಯಪಟ್ಟ ಸುಬ್ಬಯ್ಯ ಕೊಡವ ಸಮಾಜ ಮೊದಲು ಚರಿತ್ರೆಯನ್ನು ಅಧ್ಯಯನ ಮಾಡಲಿ ಎಂದು ಒತ್ತಾಯಿಸಿದರು.

ಕೊಡವ ಸಮಾಜದ ಈ ವರ್ತನೆಯಿಂದ ಸಮಾಜದಲ್ಲಿ ಕೊಡವರನ್ನು ಪ್ರತ್ಯೇಕವಾಗಿ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗುವದಲ್ಲದೆ ದ್ವೇಷ ಮನೋಭಾವನೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಗೌಡ ಸಮಾಜದ ಬಹುತೇಕ ಮಂದಿ ಬಿಜೆಪಿಯಲ್ಲಿದ್ದರೂ ಟಿಪ್ಪು ಜಯಂತಿಯ ವಿಚಾರದಲ್ಲಿ ಮೌನವಾಗಿರುವ ಮೂಲಕ ಪ್ರೌಢಿಮೆಯನ್ನು ತೋರಿದ್ದಾರೆ ಎಂದು ಸುಬ್ಬಯ್ಯ ಶ್ಲಾಘಿಸಿದರು.

(ಮೊದಲ ಪುಟದಿಂದ) ಇತ್ತೀಚೆಗೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲು ಬಿಜೆಪಿ ಸದಸ್ಯರು ಒತ್ತಡ ಹೇರಿದ್ದರು. ಈ ಸಂದರ್ಭ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‍ನ ಮಹಿಳಾ ಸದಸ್ಯರು ಬಿಜೆಪಿ ಪ್ರಸ್ತಾಪವನ್ನು ವಿಫಲಗೊಳಿಸಿದ್ದಾರೆ. ಇದು ಅತ್ಯಂತ ಚೇತೋಹಾರಿ ಬೆಳವಣಿಗೆಯಾಗಿದ್ದು, ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಮಹಿಳಾ ಸದಸ್ಯರ ಧೈರ್ಯವನ್ನು ಅನುಸರಿಸಬೇಕಾಗಿದೆ ಎಂದು ಸುಬ್ಬಯ್ಯ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಮಲ ಕಾಂಗ್ರೆಸ್ಸಿಗರ ಹಿಡಿತದಲ್ಲಿದ್ದು, ಇನ್ನು ಮುಂದೆಯಾದರೂ ಪಕ್ಷದ ಗೌರವವನ್ನು ಉಳಿಸುವ ಕೆಲಸವನ್ನು ಪ್ರಮುಖರು ಮಾಡಬೇಕಾಗಿದೆ ಎಂದರು.

ನಾಚಪ್ಪ ವಿರುದ್ಧ ಅಸಮಾಧಾನ

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎ.ಕೆ.ಸುಬ್ಬಯ್ಯ, ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಚಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.

ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಸರ್ವೆ ಸಂಖ್ಯೆ 1/6ಎ ನಲ್ಲಿ ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ತಲಾ 5 ಏಕರೆ ಮತ್ತು ಇನ್ನಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಒಟ್ಟು 16 ಏಕರೆ ಪೈಸಾರಿ ಜಾಗವನ್ನು ಎನ್.ಯು.ನಾಚಪ್ಪ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸುಬ್ಬಯ್ಯ ಆರೋಪಿಸಿದರು. ಅಕ್ರಮ - ಸಕ್ರಮ ಸಮಿತಿಯಡಿ ಪೈಸಾರಿ ಜಾಗವನ್ನು ಹೊಂದಲು ಅರ್ಹತೆ ಇಲ್ಲದಿದ್ದರೂ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ತಕ್ಷಣ ಲ್ಯಾಂಡ್ ಟ್ರಿಬ್ಯೂನಲ್ ಇದನ್ನು ಪರಿಶೀಲಿಸಿ ಅರ್ಜಿಯನ್ನು ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕೆಂದು ಸುಬ್ಬಯ್ಯ ಒತ್ತಾಯಿಸಿದರು.

ದೇವಟ್ ಪರಂಬು ಎಂದು ಹೇಳಿಕೊಳ್ಳುತ್ತಿರುವ ಜಾಗದಲ್ಲಿ ಅ.17ರ ಒಳಗೆ ಸ್ಮಾರಕ ನಿರ್ಮಾಣದ ಕಲ್ಲುಗಳನ್ನು ಸ್ಥಾಪಿಸದಿದ್ದಲ್ಲಿ ಕರಸೇವೆ ಮಾಡುವದಾಗಿ ಎನ್.ಯು. ನಾಚಪ್ಪ ಘೋಷಿಸಿದ್ದರು. ಆದರೆ, ಅ.17 ಕಳೆದರೂ ಕರಸೇವೆಯ ಯಾವದೇ ಬೆಳವಣಿಗೆ ಕಂಡು ಬರುತ್ತಿಲ್ಲ. ನಾಚಪ್ಪ ಕೇವಲ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ ಸುಬ್ಬಯ್ಯ, ಕರಸೇವೆ ಮಾಡಬೇಕು ಅಥವಾ ಮೌನ ವಹಿಸಿ ಹೋರಾಟದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.