ಸೋಮವಾರಪೇಟೆ, ಡಿ.7: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡಗನ್ನು ಕೊಡವ ಜನಾಂಗದ್ದು ಎಂದು ಬಿಂಬಿಸಿ ಕೊಳ್ಳುತ್ತಾ, ಕೊಡವಲ್ಯಾಂಡ್ ಕೇಳಿದರೆ, ಕೊಡಗಿನ ಇನ್ನಿತರ ಮೂಲನಿವಾಸಿಗಳು ಆದಿವಾಸಿ ಲ್ಯಾಂಡ್, ಗೌಡಲ್ಯಾಂಡ್, ದಲಿತ ಲ್ಯಾಂಡ್ ಕೇಳುವ ದಿನ ದೂರವಿಲ್ಲ. ಈ ಬಗ್ಗೆ ಕೊಡಗಿನ ಜನತೆ ಚಿಂತಿಸಬೇಕಿದೆ ಎಂದು ಕರ್ನಾಟಕ ರೈತಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಎಂಬದು ಸಿಎನ್ಸಿ ಕೊಡವರದಲ್ಲ, ಕೊಡಗಿನ ನಿವಾಸಿಗಳೆಲ್ಲರೂ ಕೊಡವರೆ, ಆದರೆ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಕೊಡವರಿಗೆ ಸಿಎನ್ಸಿ ಸಂಘಟನೆ ಕೊಡವ ಲ್ಯಾಂಡ್ ಕೇಳುವದಾದರೆ, ಜಿಲ್ಲೆಯಲ್ಲಿ ಶೇ.80ರಷ್ಟಿರುವ ಬಹುಸಂಖ್ಯಾತರು ಪ್ರತ್ಯೇಕ ಲ್ಯಾಂಡ್ ಕೇಳುವದು ಎಲ್ಲರ ಹಕ್ಕು ಎಂದು ಹೇಳಿದರು.
ಸಿಎನ್ಸಿ ನೇತೃತ್ವದಲ್ಲೇ ಕೊಡಗಿನಲ್ಲಿ ಗಲಭೆಗಳು ನಡೆಯುತ್ತಿದೆ. ಟಿಪ್ಪು ಜಯಂತಿ, ದೇವಟಿಪರಂಬು ಹೆಸರಿನಲ್ಲಿ ಜಿಲ್ಲೆಯಲ್ಲಿ ಕೋಮುವಾದ ಬಿತ್ತಿ, ಗಲಭೆಗಳ ಮೂಲಕ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಜಿಲ್ಲೆಯಲ್ಲಿ ಕೊಡವ ಜನಾಂಗದವರಿಗೆ ಮಾತ್ರ ಮಣೆ ಹಾಕುತ್ತಿವೆ. ಎಲ್ಲಾ ನಾಯಕತ್ವಗಳು ಒಂದೇ ಜನಾಂಗಕ್ಕೆ ಮೀಸಲಾಗಿದೆ. ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಕೂಡ ಬಹುತೇಕ ಹುದ್ದೆಗಳನ್ನು ಅವರಿಗೆ ನೀಡಿದೆ. ಆದಿವಾಸಿಗಳು, ಅಲ್ಪಸಂಖ್ಯಾತರು, ದಲಿತರ ಮತಗಳ ಮೇಲೆ ಕಾಂಗ್ರೆಸ್ ನಿಂತಿದೆ ಎಂದರು.
ಐಗೂರು ಗ್ರಾಮದಲ್ಲಿ ನಡೆದ ಎರಡೂ ದುಷ್ಕøತ್ಯಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಪೊಲೀಸರು ಬಂಧಿಸಬೇಕು. ವಿಳಂಬವಾಗುತ್ತಾ ಹೋದರೆ ಮತ್ತೊಮ್ಮೆ ಜಿಲ್ಲೆಯಲ್ಲಿ ಶಾಂತಿ ಕದಡುವ ಸಂಭವವಿದೆ ಎಂದರು.
ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮದಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆಯಾಗಿದೆ. ಇದನ್ನು ವಿರೋಧಿಸಿ ತಾ.9 ರಂದು ಕುಶಾಲನಗರದಲ್ಲಿ ರೈತಸಂಘದಿಂದ ಪ್ರತಿಭಟನೆ ನಡೆಸಲಾಗುವದು ಎಂದರು. ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್, ಕಾರ್ಯದರ್ಶಿ ಕೆ.ಟಿ.ಆನಂದ, ಸದಸ್ಯ ಅಶೋಕ್, ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಈ.ಸಣ್ಣಪ್ಪ ಉಪಸ್ಥಿತರಿದ್ದರು.