ಮಡಿಕೇರಿ, ಡಿ. 4: ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ 340 ಮತ್ತು 342ನೇ ವಿಧಿಯಡಿ ರಾಜ್ಯಾಂಗದ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಕಳೆದ 16 ವರ್ಷಗಳಿಂದ ಈ ಕುರಿತು ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಹೋರಾಟದ ಫಲವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಲ್ಲಿ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಕಾರ್ಯ ಭರದಿಂದ ಸಾಗುತ್ತಿದೆ.
ನವೆಂಬರ್ 16 ರಿಂದ ಕೊಡಗು ಜಿಲ್ಲೆಯಲ್ಲಿನ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದೆ. ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 12 ಮಂದಿಯ ತಂಡ ಇದಕ್ಕೆ ನಿಯೋಜಿತವಾಗಿದ್ದು, ಪ್ರಸ್ತುತ ವೀರಾಜಪೇಟೆ ತಾಲೂಕಿನಲ್ಲಿ ಅಧ್ಯಯನ ನಡೆಯುತ್ತಿದೆ. ಈ ತಂಡಕ್ಕೆ ಸಿಎನ್‍ಸಿ ಸಂಘಟನೆಯ ಕಾರ್ಯ ಕರ್ತರು ಅಗತ್ಯ ಸಹಕಾರ-ಮಾಹಿತಿ ಒದಗಿಸುತ್ತಿದ್ದಾರೆ. ವೀರಾಜಪೇಟೆ ತಾಲೂಕಿನ ನಂತರ ಮಡಿಕೇರಿ ಹಾಗೂ ಬಳಿಕ ಸೋಮವಾರಪೇಟೆ ತಾಲೂಕಿನಲ್ಲಿ ಈ ತಂಡ ಅಧ್ಯಯನ ನಡೆಸಲಿದೆ. ಒಟ್ಟು 3 ತಿಂಗÀಳ ಕಾಲಾವಧಿಯಲ್ಲಿ ಸಂಶೋಧನಾ ತಂಡ ತನ್ನ ವರದಿ ನೀಡಲಿರುವದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
2001 ರಿಂದಲೇ ಸಂಘಟನೆ ಈ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಹಲವಾರು ಪ್ರಮುಖರನ್ನು ನಿರಂತರವಾಗಿ ಭೇಟಿ ಮಾಡಿ ಗಮನ ಸೆಳೆಯಲಾಗಿದೆ. ಬಹುತೇಕ ಪ್ರಮುಖರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸಹಕಾರ ನೀಡಿದ ಪರಿಣಾಮವಾಗಿ ಇದೀಗ ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.
ರೂ. 11 ಲಕ್ಷ ಬಿಡುಗಡೆ
ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇದೀಗ ರೂ. 11 ಲಕ್ಷ ಹಣವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಡಿ. 1 ರಂದು
(ಮೊದಲ ಪುಟದಿಂದ) ಆದೇಶ ಹೊರಬಿದ್ದಿದೆ.
ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಇನ್ಸ್‍ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ನಾಗರಬಾವಿ ಬೆಂಗಳೂರು ಇವರಿಗೆ ವಹಿಸಲಾಗಿದ್ದು, ಅವರು ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಅಂತಿಮ ವರದಿ ಸಲ್ಲಿಸಬೇಕಿದೆ. ನಿರ್ದೇಶಕರು ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ಇವರ ಪತ್ರ 7.10.2016 ರಂತೆ ಕೊಡಗು ಜಿಲ್ಲೆಯ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕಾರ್ಯವನ್ನು ಕೈಗೊಳ್ಳಲು ತಗಲುವ ವೆಚ್ಚ ರೂ. 11 ಲಕ್ಷವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸುವಂತೆ ಹಾಗೂ ಸದರಿ ವೆಚ್ಚವನ್ನು ಕುಲಶಾಸ್ತ್ರೀಯ ಅಧ್ಯಯನ ಬಾಬ್ತಿನಿಂದ ಉಳಿದಿರುವ ಅನುದಾನದಲ್ಲಿ ಭರಿಸಲು ಅನುಮತಿ ನೀಡುವಂತೆ ಕೋರಲಾಗಿತ್ತು.
ಇದರಂತೆ ಅಧ್ಯಯನಕ್ಕಾಗಿ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ಮೈಸೂರು ಇವರಿಗೆ ಸರಕಾರದಿಂದ ಮಂಜೂರಾತಿ ನೀಡಲಾಗಿದೆ. ನಿಯಮಾನುಸಾರ ಪ್ರಾಚೀನ ಬುಡಕಟ್ಟು ಸಂಸ್ಕøತಿ, ವಿಶಿಷ್ಟ ಆಚಾರ-ವಿಚಾರ, ಭೌಗೋಳಿಕ ಸರಹದ್ದು, ಸ್ವಭಾವ, ಹಿಂದುಳಿದಿರುವಿಕೆ, ಈ ಐದು ವಿಚಾರಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡಬೇಕಿದೆ. ಅಧ್ಯಯನ ವೆಚ್ಚ ರೂ. 11 ಲಕ್ಷ ಹೊರತುಪಡಿಸಿ ಇತರ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸುವದಿಲ್ಲ. ಕೊಡವ ಸಮುದಾಯವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬಹುದೇ ಎಂಬ ಸ್ಪಷ್ಟ ಅಭಿಪ್ರಾಯವನ್ನು ವರದಿಯಲ್ಲಿ ನಮೂದಿಸಬೇಕು. ಅಧ್ಯಯನ ವರದಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸಬೇಕೆಂದು ಸೂಚಿಸಲಾಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಹೆಚ್. ವನಿತ ಆದೇಶ ಹೊರಡಿಸಿದ್ದಾರೆ.