ಮಡಿಕೇರಿ, ಡಿ. 17: ಕೇಂದ್ರ ಸರಕಾರದ ಸೂಚನೆಯಂತೆ ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಸಮೀಕ್ಷೆ ನಡೆಯುತ್ತಿರುವದನ್ನು ವಿರೋಧಿಸಿ ಎ.ಕೆ. ಸುಬ್ಬಯ್ಯ ನೇತೃತ್ವದ ಕೊಡಗು ಸೌಹಾರ್ದ ವೇದಿಕೆ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೃಷ್ಣಾದಲ್ಲಿ ಭೇಟಿ ಮಾಡಿ, ತಕ್ಷಣ ಸರ್ವೆ ಕಾರ್ಯ ನಿಲ್ಲಿಸುವಂತೆ ಮನವಿ ಸಲ್ಲಿಸಿದರು.

ಕೊಡವರನ್ನು ಎಸ್‍ಟಿಗೆ ಸೇರಿಸುವದಕ್ಕೆ ಅಸಾಧ್ಯ. ಗೊರವರು, ಕುರುಬರು, ಬೆಟ್ಟ ಕುರುಬರು, ಪಣಿಯರವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ ಕೊಡವರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾರೆ. ಕೊಡವರು ಶ್ರೇಷ್ಠ ಸಂಸ್ಕøತಿಯಲ್ಲಿ ನಂ. 1 ಸ್ಥಾನದಲ್ಲಿದ್ದಾರೆ. ಶೇ. 14 ರಷ್ಟು ಜನಸಂಖ್ಯೆ ಇದ್ದರೂ, ಶೇ. 60 ರಷ್ಟು ಆಸ್ತಿ ಹೊಂದಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿದ್ದು, ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ಇಲ್ಲದಿದ್ದು, ಕೂಡಲೇ ಕೊಡಗು ಜಿಲ್ಲಾಧಿಕಾರಿಗೆ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲಿಲ್ಲವೇಕೆ ಎಂದು ಸಿ.ಎಂ. ಪ್ರಶ್ನಿಸಿದ್ದಲ್ಲದೆ, ಕೂಡಲೇ ಸರ್ವೆ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ನಿಷೇಧಕ್ಕೆ ಆಗ್ರಹ

ದೇಶದ್ರೋಹಿ ಕೆಲಸ ಮಾಡುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್‍ಅನ್ನು ನಿಷೇಧಿಸಬೇಕು ಎಂದು ಕೊಡವ ಸೌಹಾರ್ಧ ವೇದಿಕೆ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಹೆಸರಿನಲ್ಲಿ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ವಿರುದ್ಧ ಸಿ.ಐ.ಡಿ. ತನಿಖೆ ನಡೆಸುವಂತೆ ಇದೇ ವೇಳೆ ದೂರು ನೀಡಲಾಯಿತು. ಕೊಡವ ನ್ಯಾಷನಲ್ ಕೌನ್ಸಿಲ್, ಗಣರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸುತ್ತಿದೆ ಮತ್ತು ರಾಜ್ಯೋತ್ಸವವನ್ನು ಧಿಕ್ಕರಿಸಿ ನ. 1 ರಂದು ಪ್ರತಿಭಟನೆಗಳನ್ನು ನಡೆಸುತ್ತಿದೆ. ಕೊಡಗಿನಲ್ಲಿ ಶಾಂತಿಯಿಂದ ಬದುಕುವವರ ಸೌಹಾರ್ದತೆ ಕೆಡಿಸುವ ಕೆಲಸವನ್ನು ನಾಚಪ್ಪ ಮಾಡುತ್ತಿದ್ದಾರೆ. ಅವರು 25 ವರ್ಷಗಳಿಂದ ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು. ಅವರೊಂದಿಗೆ ಕಾಂಗ್ರೆಸ್‍ನ ಬ್ರಿಜೇಶ್ ಕಾಳಪ್ಪ, ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೈ ಜೋಡಿಸಿದ್ದಾರೆ. ಇದೆಲ್ಲವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕೊಡವ ನ್ಯಾಷನಲ್ ಕೌನ್ಸಿಲ್‍ಗೆ ಎಲ್ಲಿಂದ ಹಣ ಬರುತ್ತಿದೆ ಎಂಬ ಬಗ್ಗೆ ಸಿ.ಐ.ಡಿ. ತನಿಖೆ ಮಾಡುವಂತೆ ದೂರು ನೀಡಲಾಗಿದೆ ಎಂದರು.

ಹಲವು ಪ್ರಮುಖರು ಭಾಗಿ

ಎ.ಕೆ. ಸುಬ್ಬಯ್ಯ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಸಂದರ್ಭ ಸುಬ್ಬಯ್ಯ ಅವರೊಂದಿಗೆ ಜಿಲ್ಲೆಯ ಹಲವು ಪ್ರಮುಖರು ಭಾಗಿಗಳಾಗಿದ್ದರು. ಕೆ.ಪಿ.ಸಿ.ಸಿ. ಸದಸ್ಯೆ ಕೆ.ಪಿ. ಚಂದ್ರಕಲಾ, ಗೌಡ ಸಮಾಜದ ದಂಬೆಕೋಡಿ ಆನಂದ್, ಕುಯ್ಯಮುಡಿ ಪೂರ್ಣಯ್ಯ, ಕಾಂಗ್ರೆಸ್ಸಿನ ನಾಪಂಡ ಮುತ್ತಪ್ಪ, ಎಂ.ಎ. ಪೊನ್ನಪ್ಪ ಹಾಗೂ ಇತರರು ಹಾಜರಿದ್ದರು.