ಮಡಿಕೇರಿ, ಆ. 20: ಪ್ರತಿಭಾವಂತ ಕೊಡಗು ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೊಡಗು ಗೌಡ ವಿದ್ಯಾ ಸಂಘದಿಂದ “ಪ್ರತಿಭಾ ವೇತನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅತೀ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುವಂತೆ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿ ಕೂಡ ಪ್ರತಿಭಾ ವೇತನವನ್ನು ನೀಡಲಾಗು ತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಸೆ. 20 ರೊಳಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ಸಂಘದ ಕಚೇರಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಗ್ರಾಮೀಣ ಭಾಗದ 10ನೇ ತರಗತಿ ವಿದ್ಯಾರ್ಥಿಗಳು ಶೇ. 85 ಕ್ಕಿಂತ ಅಧಿಕ ಅಂಕ ಮತ್ತು ನಗರದ ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಪಡೆದವರು ಅರ್ಜಿ ಸಲ್ಲಿಸ ಬಹುದಾಗಿದೆ. ಪದವಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರು ಮತ್ತು ಸಿಇಟಿಯಲ್ಲಿ ಸಾವಿರ ರ್ಯಾಂಕ್ ಒಳಗೆ ಉತ್ತೀರ್ಣರಾಗಿರುವ ಗೌಡ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಭಾ ವೇತನ ನೀಡಲಾಗುವದೆಂದು ತಿಳಿಸಿದರು.

ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೇ ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದವರು ಹಾಗೂ ಕ್ರೀಡೆ, ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಸಲಾಗುವದು. ಇವರುಗಳು ಕೂಡ ಸೆ. 20 ರೊಳಗೆ ಸೂಕ್ತ ದಾಖಲೆ ಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೆ. 18 ರಂದು ವಿವಿಧ ಸ್ಪರ್ಧೆ

ಗೌಡ ಜನಾಂಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೆ. 18 ರಂದು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್‍ಕೆಜಿ ಯಿಂದ 1ನೇ ತರಗತಿವರೆಗೆ ಛದ್ಮವೇಷ ಸ್ಪರ್ಧೆ, 2 ರಿಂದ 4ನೇ ತರಗತಿವರೆಗೆ ಜ್ಞಾಪಕ ಶಕ್ತಿ ಸ್ಪರ್ಧೆ, 5 ರಿಂದ 7ನೇ ತರಗತಿವರೆಗೆ ಜಾನಪದ ಗೀತೆ(ಸೋಲೋ), 8 ರಿಂದ 10ನೇ ತರಗತಿವರೆಗೆ ಸಾಮಾನ್ಯ ಜ್ಞಾನದ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಸೆ. 18 ರಂದು ಬೆಳಿಗ್ಗೆ 9 ಗಂಟೆ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಹೊಸೂರು ರಮೇಶ್ ಜೋಯಪ್ಪ ತಿಳಿಸಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ದರವನ್ನು ನೀಡಲಾಗುವದೆಂದು ಹೇಳಿದರು. ಮೈಸೂರಿನ ಜಯಲಕ್ಷ್ಮೀ ಪುರಂನಲ್ಲಿ ರುವ ಕೊಡಗು ಗೌಡ ವಿದ್ಯಾ ಸಂಘದ ವಿದ್ಯಾರ್ಥಿ ನಿಲಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ರಮೇಶ್ ಜೋಯಪ್ಪ ಇದೇ ಸಂದರ್ಭ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ 08272-225970 ನ್ನು ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ಜಂಟಿ ಕಾರ್ಯದರ್ಶಿ ಕಟ್ಟೆಮನೆ ಸೋನಾಜಿತ್ ಹಾಗೂ ಕಾರ್ಯದರ್ಶಿ ಸೂದನ ಈರಪ್ಪ ಉಪಸ್ಥಿತರಿದ್ದರು.