ಮೂರ್ನಾಡು, ಜ.8 : ಕೊಡಗು ಜಿಲ್ಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರರ್ ಡಾ. ಕೋಡಿರ ಎಂ. ಲೋಕೇಶ್ ಹೇಳಿದರು.ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಮೊದಲ ಮಹಡಿಯ ಕಟ್ಟಡ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಶಿಕ್ಷಣ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಂಡಿತು. ಬ್ರಿಟೀಷರ ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಮುಖಾಂತರ ಕೆಲವು ಆಯ್ದ ಸ್ಥಳಗಳಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಇತ್ತು. ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ಪ್ರೌಢಶಾಲಾ ಮಟ್ಟಕ್ಕೆ ಶಿಕ್ಷಣ ತಲಪಿತು. 21ನೇ ಶತಮಾನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಕಂಡು ವೈದ್ಯಕೀಯ, ಇಂಜಿನಿಯರ್ ಕಾಲೇಜುಗಳು ಸ್ಥಾಪನೆಗೊಂಡು ಶೈಕ್ಷಣಿಕ ಗುಣಮಟ್ಟ ಸುಧಾರಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ಸೌಲಭ್ಯಗಳು ದೊರಕುತ್ತಿದೆ. ಅಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ವಿಚಾರಗಳಿಗೆ ಆದ್ಯತೆ ನೀಡಿ, ಅನ್ಯ ವಿಚಾರಗಳನ್ನು ಮೆಟ್ಟಿ ನಿಂತಾಗ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದರು.

ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದರು. ಕಟ್ಟಡದ ದಾನಿಗಳಾದ ಬಾಚೆಟ್ಟಿರ ಲಾಲು ಮುದ್ದಯ್ಯ, ಕಮಲು ಮುದ್ದಯ್ಯ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಖಜಾಂಚಿ ಪುದಿಯೊಕ್ಕಡ ಸಿ. ಸುಬ್ರಮಣಿ, ನಿದೇರ್ಶಕ ರಾಜ ಮಾದಪ್ಪ, ಈರಮಂಡ ಸೋಮಣ್ಣ, ಬಡುವಂಡ ಸುಬ್ರಮಣಿ, ಎ.ಎಂ. ಶೈಲಾ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪದವಿ ಕಾಲೇಜಿನ ಪ್ರಾಂಶುಪಾಲೆ ಸಿ.ಜೆ. ಪ್ರಿಯಾ, ಪದವಿ ಪೂರ್ವ ಕಾಲೇಜಿನ

(ಮೊದಲ ಪುಟದಿಂದ) ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್ ಇತರರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು. ಕಟ್ಟದ ಗುತ್ತಿಗೆದಾರ ಕೆ.ಎಂ. ಮಜೀದ್ ಹಾಗೂ ಇಂಜಿನಿಯರ್ ಸತ್ಯ ನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ನೆರೆದ ಸಭಿಕರ ಮನತಣಿಸಿತು.ಪ್ರೌಢಶಾಲಾ ಶಿಕ್ಷಕಿ ತೇಜಸ್ವಿ ಸ್ವಾಗತಿಸಿ, ಪದವಿ ಪೂರ್ವ ಕಾಲೇಜಿನ ಕುಮುದ ಕಾರ್ಯಕ್ರಮ ನಿರೂಪಿಸಿ, ಕಲಾವತಿ ವಂದಿಸಿದರು.