ಸೋಮವಾರಪೇಟೆ,ನ.29: ಕೊಡಗಿನ ಜನಪದ ಸಾಹಿತ್ಯ, ಬದುಕು, ಬರಹಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿ ಕಲೆ ಹಾಕುವ ಮೂಲಕ ಪುಸ್ತಕ ಹಾಗೂ ಸಾಕ್ಷ್ಯಚಿತ್ರವನ್ನು ಹೊರತರಲು ಕರ್ನಾಟಕ ಜಾನಪದ ಪರಿಷತ್ನ ಚಿಂತನೆ ಹರಿಸಿದೆ ಎಂದು ಪರಿಷತ್ನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.ಜನಪದ ಪರಿಷತ್ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ನಗರದ ಪತ್ರಿಕಾಭವನದಲ್ಲಿ, ಸೋಮವಾರಪೇಟೆ ಹೋಬಳಿ ಘಟಕ ರಚಿಸುವ ಸಂಬಂಧ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗಿನ ಮೂಲ ನಿವಾಸಿಗಳ ಆಚಾರ ವಿಚಾರ, ಎಲ್ಲಾ ಜನಾಂಗಗಳ ಜನಪದ ನೃತ್ಯ, ಪದಗಳು, ಗೀತೆಗಳು, ಮಾತು, ಭಾಷೆ, ಅಡುಗೆ ಸೇರಿದಂತೆ ಎಲ್ಲಾ ಪ್ರಾಕಾರಗಳನ್ನು ಗುರುತಿಸಿ ಅವುಗಳನ್ನು ದಾಖಲೀಕರಿಸುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ. ಇದರೊಂದಿಗೆ ಕೊಡಗಿನ ಜನಪದ ಕಲಾವಿದರÀ ಸಮಗ್ರ ಪರಿಚಯ, ಜನಪದ ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ಪುಸ್ತಕಗಳನ್ನು ಹೊರತರಲು ಪರಿಷತ್ ಮುಂದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನಪದ ಮ್ಯೂಸಿಯಂ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಜನಪದ ಕಲಾವಿದರಲ್ಲಿ ಸ್ಫೂರ್ತಿ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಿದೆ. ಜನಪದ ಪರಿಷತ್ನ ಘಟಕಗಳಲ್ಲಿ ಯಾವದೇ ರಾಜಕೀಯಕ್ಕೆ ಅವಕಾಶ ನೀಡದೇ ಸ್ವಯಂಪ್ರೇರಿತರಾಗಿ ಜನಪದ ಸೊಗಡನ್ನು ಜಿಲ್ಲೆಯಾದ್ಯಂತ ಪಸರಿಸಲು, ಜನಪದ ಕಲಾವಿದರನ್ನು ಪ್ರೋತ್ಸಾಹಿಸಲು ಜನಪದ ಪರಿಷತ್ ಘಟಕಗಳು ಕಾರ್ಯಕ್ರಮ ಹಮ್ಮಿಕೊಳ್ಳ ಬೇಕಿದೆ ಎಂದು ಅನಂತಶಯನ ಅವರು ತಿಳಿಸಿದರು. ಪರಿಷತ್ನ ಜಿಲ್ಲಾ ಸಂಚಾಲಕ ಸಂಕೇತ್ ಪೂವಯ್ಯ ಮಾತನಾಡಿ,
(ಮೊದಲ ಪುಟದಿಂದ) ಜನಪದ ಪರಿಷತ್ ವತಿಯಿಂದ ಈಗಾಗಲೇ ಜಿಲ್ಲೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ 18 ಮೂಲ ನಿವಾಸಿಗಳೊಂದಿಗೆ ಇತರ ಸಮುದಾಯಗಳ ಜನಪದ ಬದುಕನ್ನು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಜನಪದ ಸಂಸ್ಕøತಿ ಅಳಿಯದಂತೆ ಉಳಿಸಬೇಕಿದೆ ಎಂದರು.
ಪರಿಷತ್ನ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಪರಿಷತ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ವಾರ್ಷಿಕ ರೂ.250 ಹಾಗೂ ಅಜೀವ ಸದಸ್ಯತ್ವ ರೂ.1000ಗಳನ್ನು ನಿಗದಿಪಡಿಸಲಾಗಿದೆ. ತಾಲೂಕು ಘಟಕದ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗುವದು. ಪರಿಷತ್ ಸದಸ್ಯರಿಗಾಗಿ ಸಂಗೀತ ಗ್ರಾಮ ರುದ್ರಪಟ್ಟಣಕ್ಕೆ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಪರಿಷತ್ನ ಜಿಲ್ಲಾ ಉಪಾಧ್ಯಕ್ಷರುಗಳಾದ ರಾಣಿ ಮಾಚಯ್ಯ, ಶೋಭಾ ಸುಬ್ಬಯ್ಯ, ತಾಲೂಕು ಉಪಾಧ್ಯಕ್ಷ ಭರಮಣ್ಣ ಬೆಟ್ಟಗೇರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಉಪಸ್ಥಿತರಿದ್ದರು.