ಪೊನ್ನಂಪೇಟೆ, ಸೆ. 16: ಜನತೆಗೆ ತೀವ್ರ ಅನಾನುಕೂಲವಾಗುತ್ತಿರುವ ಕೊಡಗಿನ ಕಂದಾಯ ಸಮಸ್ಯೆಗಳಿಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಇಚ್ಚಾಶಕ್ತಿಯೇ ಪ್ರಮುಖ ಕಾರಣವಾಗಿದೆ. ಇಲ್ಲದ ಕಾನೂನುಗಳನ್ನು ತಾವೇ ಸ್ವಯಂ ಘೋಷಿಸಿಕೊಂಡು ಜನರಿಗೆ ಕಿರುಕುಳ ನೀಡುವದು ಕಂದಾಯ ಇಲಾಖೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನ ಎಲ್ಲಾ ಕಂದಾಯ ಸಮಸ್ಯೆಗಳಿಗೆ 1964ರ ಸಮಗ್ರ ಕರ್ನಾಟಕ ಭೂ ಕಂದಾಯ ಕಾಯ್ದೆಯನ್ನು ಯಾಥಾವತ್ತಾಗಿ ಜಾರಿಗೊಳಿಸುವದೇ ಸೂಕ್ತ ಪರಿಹಾರ ಎಂದು ಹಿರಿಯ ಮುಖಂಡ ಹಾಗೂ ಕರ್ನಾಟಕ ವಿಧಾನಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕ ಎ.ಕೆ ಸುಬ್ಬಯ್ಯ ಅವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ತಿಳಿಸಿದರು.ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಭೆÉೀಟಿಯಾಗಿ ಚರ್ಚೆ ನಡೆಸಿದ ಎ.ಕೆ. ಸುಬ್ಬಯ್ಯ ಅವರು ಕೊಡಗಿನ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಿದರು. 1964ರ ಸಮಗ್ರ ಕರ್ನಾಟಕ ಭೂ ಕಂದಾಯ ಕಾಯ್ದೆ ಅಸ್ತಿತ್ವಕ್ಕೆ ಬಂದ ಬಳಿಕ ಇಡೀ ರಾಜ್ಯಕ್ಕೆ ಏಕಮಾತ್ರ ಕಂದಾಯ ಕಾನೂನು ಜಾರಿಯಾಯಿತು. ಆದರೆ ಕೊಡಗಿನಲ್ಲಿ ಮಾತ್ರ ಈ ಕಾಯ್ದೆ ಸರಿಯಾಗಿ ಅನುಷ್ಠಾನವಾಗದಿರುವದೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. 1964ರ ಈ ಕಾಯ್ದೆ ಅಸ್ತಿತ್ವಕ್ಕೆ ಬಂದ ಬಳಿಕ ಕೊಡಗಿನ ಹಳೆಯ ಕಾನೂನು ಸಹಜವಾಗಿ ರದ್ದಾಗಿದೆ. ಆದರೆ ಕೊಡಗಿನಲ್ಲಿ ಹಳೆ ಕಾನೂನನ್ನೇ ನೆಪವಾಗಿರಿಸಿ ಜನತೆಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಹೋರಾಟ ನಡೆದರೂ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂದು ಎ.ಕೆ ಸುಬ್ಬಯ್ಯ ಅವರು ಸಚಿವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ 1964ರ ಈ ಕಾಯ್ದೆಯ ಆಧಾರದಲ್ಲೇ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮೊದಲಾದ ಕಂದಾಯ ಅಧಿಕಾರಿಗಳ ನೇಮಕಾತಿ ನಡೆಯುತ್ತಿದೆ. ಆದರೆ ಕೊಡಗಿಗೆ ಬರುವ ಕಂದಾಯ ಅಧಿಕಾರಿಗಳು ಈ ಕಾಯ್ದೆಯಂತೆ ಜನರ ಸಮಸ್ಯೆ ಪರಿಹರಿಸದೆ ಹಳೆಯ ಕಂದಾಯ ಕಾಯ್ದೆಯನ್ನು ನೆಪವಾಗಿರಿಸಿ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ಹೇಳಿದರು.
ಹಳೆಯ ಜಮಾಮಂದಿ ರದ್ದಾಗಿ ಆರ್.ಟಿ.ಸಿ ಜಾರಿಗೆ ಬಂತು. ಆರ್.ಟಿ.ಸಿ ಯಲ್ಲೂ ಕೂಡ ಸಾಕಷ್ಟು ಲೋಪಗಳಿವೆ. ಆರ್.ಟಿ.ಸಿ ಯ ಪಟ್ಟಾ ಎಂಬ ಕಾಲಂನಲ್ಲಿ ಇಂದಿಗೂ ಕಂದಾಯ ಇಲಾಖೆ ಜಮ್ಮಾಬಾಣೆ ಮತ್ತು ಸಾಗುಬಾಣೆ ಎಂಬದನ್ನು ನಮೂದಿಸಿದೆ. ಈ ರೀತಿ ನಮೂದಿಸಲು ಯಾವ ಕಾನೂನಿದೆ? ಅಥವಾ ಈ ಬಗ್ಗೆ ಸರಕಾರ ಯಾವದಾದರೂ ಆದೇಶ ಹೊರಡಿಸಿದೆಯೇ? ಈ ಕಾಲಂನಲ್ಲಿ ಈ ರೀತಿ ಬರೆಯಲು ಅಧಿಕಾರ ನೀಡಿದವರು ಯಾರು? ಎಂದು ಸಚಿವರ ಸಮ್ಮುಖದಲ್ಲ್ಲೇ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಪ್ರಶ್ನಿಸಿದ ಎ.ಕೆ. ಸುಬ್ಬಯ್ಯ, ಆರ್.ಟಿ.ಸಿ.ಯ ‘ಪಟ್ಟಾ’ ಎಂಬ ಕಾಲಂನಲ್ಲಿ ‘ಸರಕಾರ’ ಎಂದು ನಮೂದಾಗಬೇಕು. ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲೂ ಈ ರೀತಿ ನಮೂದಾಗುತ್ತಿದೆ ಎಂದು ಹೇಳಿದರು.
ಬಾಣೆ ಜಮೀನು ಮತ್ತು ಕೊಡಗಿನ ಸಿ ಮತ್ತು ಡಿ ಜಮೀನು ಸಮಸ್ಯೆ ಬಗೆಯೂ ಚರ್ಚೆ ವೇಳೆ ಬೆಳಕು ಚೆಲ್ಲಿದ ಎ.ಕೆ.ಸುಬ್ಬಯ್ಯ ಅವರು, ಅರಣ್ಯಾಧಿಕಾರಿಗಳ ಷಡ್ಯಂತ್ರಗಳಿಂದಾಗಿ ಸಿ. ಮತ್ತು ಡಿ ಜಮೀನು ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ತಲತಲಾಂತರದಿಂದ ಕೊಡಗಿನ ಅರಣ್ಯದಂಚಿನಲ್ಲಿ ಗಿರಿಜನರಿಗೆ ಕಂದಾಯ ಇಲಾಖೆಯಿಂದ ಇದುವರೆಗೂ ಸರಿಯಾದ ನ್ಯಾಯ ಸಿಗಲಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಅದು ಸರಿಯಾಗಿ ವಿಲೇವಾರಿಯಾಗದೆ ಸಾಕಷ್ಟು ಜನರಿಗೆ ಹಕ್ಕು ಪತ್ರ ದೊರೆತಿಲ್ಲ. ಇದರಿಂದ ಕೊಡಗಿನ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರಿಂದ ಬಡವರ ಮತ್ತು ಜನಪರವಾದ ಕಾರ್ಯನಿರ್ವಹಣೆಯ ಬದ್ದತೆ ಹೊಂದಿರುವ ಸಚಿವರಾದ ತಾವು, ಕೊಡಗಿನ ಕಂದಾಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರದ ಮಾರ್ಗೋಪಾಯಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅವುಗಳನ್ನು ಜಾರಿಗೆ ತರುವಲ್ಲಿ ಆಸಕ್ತಿ ವಹಿಸಬೇಕು ಎಂದು ಸುಬ್ಬಯ್ಯ ಆಗ್ರಹಿಸಿದರು.
ಕೊಡಗಿನ ಕಂದಾಯ ಸಮಸ್ಯೆ ಈಗಿನಿಂದಲ್ಲ ಸಾಕಷ್ಟು ವರ್ಷಗಳಿಂದ ಜಟಿಲಗೊಂಡಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿ ತೋರದೆ ಕೆಲ ಪರಿಸರವಾದಿಗಳೊಂದಿಗೆ ಕೈಜೋಡಿಸಿ ಕೊಡಗಿನ ಭೂ ಹಿಡುವಳಿದಾರರ ಮತ್ತು ಬಡವರ ವಿರುದ್ಧ ವ್ಯಾಪಕವಾದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಸುಬ್ಬಯ್ಯ ಅವರು ಸಚಿವರ ಗಮನ ಸೆಳೆದರು. ಈ ಹಿಂದೆಯೂ ಕಂದಾಯ ಸಚಿವರಾಗಿದ್ದ ಹುಚ್ಚುಮಾಸ್ತಿಗೌಡ್ರು ಮತ್ತು ಎಸ್.ಆರ್. ಬೊಮ್ಮಾಯಿ ಕೊಡಗಿಗೆ ಬಂದು ಕಂದಾಯ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿ ತೆರಳಿದವರು ಹಾಗೆಯೇ ‘ತೆರಳಿಬಿಟ್ಟರು’. ಆದರೆ ನಿಮ್ಮ ಭೇಟಿ ಹಾಗಾಗದೇ ಕೊಡಗಿನ ಜನರ ಕಂದಾಯ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿ ಎಂದು ಸುಬ್ಬಯ್ಯ ಸಚಿವ ಕಾಗೋಡು ತಿಮ್ಮಪ್ಪ ಅವರ ಬಳಿ ಹಾಸ್ಯಚಟಾಕಿ ಹಾರಿಸಿ ನಿರ್ಗಮಿಸಿದರು.