ಮಡಿಕೇರಿ, ಡಿ. 5: ರೂ. 500 - 1000 ನೋಟು ಚಲಾವಣೆ ರದ್ದುಗೊಂಡ ಬಳಿಕ ಕೊಡಗು ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನವೆಂಬರ್ ಅಂತ್ಯದವರೆಗೆ ರೂ.1076 ಕೋಟಿ ಹಳೇ ನೋಟುಗಳು ಸಂಗ್ರಹಗೊಂಡಿವೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೇವಯ್ಯ ಅವರು ಇಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾಹಿತಿಯಿತ್ತರು.

ನೋಟು ರದ್ದುಗೊಂಡ ಬಳಿಕ ಜಿಲ್ಲೆಯ ಬ್ಯಾಂಕ್‍ಗಳಿಗೆ 650 ಕೋಟಿ ರೂ.ನಷ್ಟು 2000 ರೂ.ನ ನೋಟುಗಳು ಬಂದಿದ್ದು, ಅದರಲ್ಲಿ ಪ್ರಸ್ತುತ 165 ಕೋಟಿ ರೂ. ಮಾತ್ರ ಬಾಕಿಯಿದೆ. ಪ್ರಸ್ತುತ ಬ್ಯಾಂಕ್‍ಗಳಲ್ಲಿ ಚಿಲ್ಲರೆ ಸಮಸ್ಯೆ ಉಲ್ಬಣಗೊಂಡಿದ್ದು, 500 ರೂ.ಗಳ ಹೊಸನೋಟು ಜಿಲ್ಲೆಗೆ 25ಲಕ್ಷದಷ್ಟು ಬಂದು ಅದು ಕೂಡ ಖಾಲಿಯಾಗಿದೆ. ಜಿಲ್ಲೆಯಲ್ಲಿರುವ ಆರ್‍ಬಿಐನ 6 ಹಣ ಸಂಗ್ರಹ ಕೇಂದ್ರಗಳಲ್ಲಿ ಹಳೆಯ 500 ಹಾಗೂ 1000 ರೂ. ನೋಟುಗಳು ಭರ್ತಿ ಯಾಗಿದ್ದು, ಅವುಗಳನ್ನು ಕೂಡಲೇ ಆರ್‍ಬಿಐನ ಕೇಂದ್ರ ಘಟಕಕ್ಕೆ ಸರಬರಾಜು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ

(ಮೊದಲ ಪುಟದಿಂದ) ದೇವಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. 100,50, 10, 20 ರೂ.ಗಳ ನೋಟುಗಳು ಬ್ಯಾಂಕ್‍ಗಳಿಗೆ ಜಮಾವಣೆ ಯಾಗುವದರ ಜೊತೆಗೆ ಹೊಸ 500 ರೂ. ನೋಟು ಕನಿಷ್ಟ 100 ಕೋಟಿಯಷ್ಟು ದೊರೆತರೆ ಅನುಕೂಲವಾಗಲಿದೆ ಎಂದು ದೇವಯ್ಯ ಹೇಳಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಅವರು, ನೋಟು ರದ್ದು ಸಂಬಂಧ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಪಡುತ್ತಿರುವ ಬಗ್ಗೆ ಶ್ಲಾಘಿಸಿದರು. ಕೆಲವೆಡೆ 500 ರೂ. ಗೆ 400 ರೂ. ಚಿಲ್ಲರೆ, 2000 ರೂ. 1800 ರೂ ಚಿಲ್ಲರೆ ನೀಡುವ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಗಮನಕ್ಕೆ ಬಂದರೆ ಕೂಡಲೇ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಆನ್‍ಲೈನ್ ಮೂಲಕ ಹಣ ಜಮಾವಣೆಗೆ ಜನರನ್ನು ಪ್ರೋತ್ಸಾಹಿಸಿ ಈ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ನೋಟು ವಿಲೇವಾರಿ, ಸರಬರಾಜು ಸಂಬಂಧ ಪೊಲೀಸ್ ಇಲಾಖೆಯಿಂದ ಅಗತ್ಯ ಭದ್ರತೆ ಒದಗಿಸುವದಾಗಿ ನುಡಿದರು. ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಇದ್ದರು.