ಸೋಮವಾರಪೇಟೆ, ಆ. 4: ಕೊಡಗು ಜಿಲ್ಲೆಯಲ್ಲಿ ಯಾವದೇ ಕಾರಣಕ್ಕೂ ಮೋಡ ಬಿತ್ತನೆ ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಮನವರಿಕೆ ಮಾಡಿಕೊಡಲಾಗಿದ್ದು, ಸಚಿವರೂ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಸೋಮವಾರ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೋಡ ಬಿತ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತಂದು ಮೋಡ ಬಿತ್ತನೆಯಿಂದಾಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಜಿಲ್ಲೆಯ ಜನರಿಗೆ ಯಾವದೇ ಆತಂಕ ಬೇಡ ಎಂದು ಲೋಕೇಶ್ ಹೇಳಿದರು.

ತಾ. 7 ರಂದು ಕೊಡ್ಲಿಪೇಟೆಯಲ್ಲಿ ಸಭೆ: ಕೊಡ್ಲಿಪೇಟೆ ಹೋಬಳಿ ಮತ್ತು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ತಾ.7 ರಂದು ಕೊಡ್ಲಿಪೇಟೆ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಲೋಕೇಶ್ ತಿಳಿಸಿದರು. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು, ಸಾಧನೆ ಇವುಗಳ ಬಗ್ಗೆ ಮತದಾರರಿಗೆÀ ಮನವರಿಕೆ ಮಾಡಿಕೊಡುವದೂ ಸೇರಿದಂತೆ ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಲಾಗುವದು. ಇದೇ ಸಂದರ್ಭ ಹೋಬಳಿ, ವಲಯ, ಬೂತ್ ಸಮಿತಿಗಳ ಆಯ್ಕೆಯೊಂದಿಗೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವದು ಎಂದು ಹೇಳಿದರು. ಕೇಂದ್ರ ಸರ್ಕಾರದ ದುರಾಡಳಿತ, ಬಿಜೆಪಿಯ ಸಂಘ ಪರಿವಾರದ ಕಾರ್ಯಕರ್ತರು ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ ಮತ್ತು ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯ ಕರ್ತರು ಮಾಡಬೇಕಾಗಿದ್ದು, ಈ ಬಗೆಗಿನ ಕಾರ್ಯಕ್ರಮಗಳ ರೂಪು ರೇಷೆಯನ್ನು ಸಿದ್ದಪಡಿಸ ಲಾಗುವದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಾ. 5 ರಂದು (ಇಂದು) ಕಾಂಗ್ರೆಸ್ ವತಿಯಿಂದ ಮಡಿಕೇರಿ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯ ಲಿದ್ದು, ತಾಲೂಕಿನಿಂದ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ತೆರಳಲಿದ್ದಾರೆ ಎಂದರು. ದೇಶದಲ್ಲಿ ಕಸಾಯಿಖಾನೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 730 ಕೋಟಿ ರೂ.ಗಳ ಅನುದಾನ ಘೋಷಿಸಿದೆ. ಆದರೆ ಬಿಜೆಪಿ ಅಂಗಸಂಸ್ಥೆಗಳ ಕಾರ್ಯಕರ್ತರು ದನದ ಮಾಂಸ, ದನ ಸಾಗಾಟದ ನೆಪದಲ್ಲಿ ದಲಿತರು ಹಾಗು ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ಪಕ್ಷದ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಡ್ಲಿಪೇಟೆ ಅಬ್ಬಾಸ್, ಪ್ರಮುಖರಾದ ತೇಜ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.