ವೀರಾಜಪೇಟೆ, ಅ.21: ಕೊಡಗು ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಯನ್ನು ವೀರಾಜಪೇಟೆ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿರೋಧಿಸುತ್ತಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಶಾಶ್ವತವಾಗಿ ನಿಷೇಧಿಸಲು ಸರಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ವಾಂಚಿರ ಟಿ. ನಾಣಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಣಯ್ಯ ಅವರು ಕಳೆದ ವರ್ಷ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿ ಸಾವು -ನೋವುಗಳು ಸಂಭವಿಸಿದೆ. ಟಿಪ್ಪುವಿನ ಇತಿಹಾಸ ವನ್ನು ಅವಲೋಕಿಸಿದಾಗ ಜಿಲ್ಲೆಯ ಜನತೆಗೆ, ಅದರಲ್ಲೂ ಕೊಡವ ಜನಾಂಗಕ್ಕೆ ವಂಚನೆಯಾಗಿದೆ ಹೊರತು ಪ್ರಯೋಜನವಾಗಿಲ್ಲ. ಆತನ ಜನ್ಮ ದಿನಾಚರಣೆಯನ್ನು ಆಚರಿಸಿ ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರವನ್ನು ಸರ್ಕಾರವೆ ಮಾಡುತ್ತಿದೆ. ಸಾಮರಸ್ಯ ಜೀವನವನ್ನು ನಡೆಸುತ್ತಿರುವ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿ ಜನಾಂಗೀಯ ಸಂಘóರ್ಷ ಉಂಟಾದರೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದರು.
ಕೊಡವ ಸಮಾಜಗಳು ಯಾವದೇ ಒಂದು ಪಕ್ಷಕ್ಕೆ ಸೇರಿದಲ್ಲ. ಎಲ್ಲಾ ಪಕ್ಷದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಮುತ್ಸದ್ಧಿ ರಾಜಕಾರಣಿಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಅಸಂಬದ್ದ ಹೇಳಿಕೆಗಳನ್ನು ನೀಡಿ ನಿರಂತರ ಶಾಂತಿ ಕದಡುವ ಪ್ರಯತ್ನದಲ್ಲಿದ್ದಾರೆ. ಅಂತಹ ಹೇಳಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವದು ಸೂಕ್ತ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇಂದ್ರಿಮಾಡ ಪ್ರಿನ್ಸ್ ಸೋಮಯ್ಯ, ಕಾರ್ಯದರ್ಶಿ ಕುಲ್ಲಚಂಡ ಪೂಣಚ್ಚ, ನಿರ್ದೇಶಕ ಕೊಂಗಂಡ ಟಾಟ ನಾಣಯ್ಯ ಉಪಸ್ಥಿತರಿದ್ದರು.