ಗೋಣಿಕೊಪ್ಪಲು, ಜ.30: ಕೊಡಗಿನ ಸರ್ಕಾರಿ ಸ್ವಾಮ್ಯದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಎಂಬಿಬಿಎಸ್ ಪೂರೈಸಿದ ಅಲೋಪತಿ ವೈದ್ಯರುಗಳು ಹಿಂದೇಟು ಹಾಕುತ್ತಿದ್ದ ಹಿನ್ನೆಲೆ, ಕಳೆದ ಎರಡು ತಿಂಗಳ ಹಿಂದೆ 23 ಆಯುಷ್ (ಆಯುರ್ವೇದ ವೈದ್ಯರು) ವೈದ್ಯರ ನೇಮಕಾತಿಗಾಗಿ ಪ್ರಕಟಣೆ ನೀಡಲಾಗಿತ್ತು. ಆದರೆ, ದುರದೃಷ್ಟವಶಾತ್ ಕೇವಲ 12 ಆಯುರ್ವೇದ ವೈದ್ಯರುಗಳು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು, ಇನ್ನುಳಿದ 11 ಆಯುರ್ವೇದ ವೈದ್ಯರುಗಳು ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕಿದ್ದಾರೆ ಎಂದು ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿಸುಬ್ರಮಣಿ ಆತಂಕ ವ್ಯಕ್ತಪಡಿಸಿದರು.
ಮಾಕುಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾ.28 ರಂದು ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 20 ಮಂದಿ ವೈದ್ಯರ ತಂಡದ ಚಾರಣ ಹಾಗೂ ವಿನಾಶದ ಅಂಚಿನಲ್ಲಿರುವ ಔಷಧಿ ಸಸ್ಯಗಳ ದಾಖಲಾತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೀಗ ಕೊಡಗಿನಲ್ಲಿ ಅಧ್ಯಯನಕ್ಕಾಗಿ ಬಂದಿರುವ ವೈದ್ಯರ ತಂಡ ಮುಂದೆ ಕೊಡಗಿನ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದಾದಲ್ಲಿ ತಮ್ಮ ಸಂಪೂರ್ಣ ಸಹಕಾರವಿದೆ. ಕೊಡಗಿನಲ್ಲಿ ಒಟ್ಟು ಎಂಬಿಬಿಎಸ್ ಮಾಡಿರುವ 30 ವೈದ್ಯರುಗಳಿಗೆ ಬೇಡಿಕೆಯಿದ್ದು ಕೊಡಗಿನಲ್ಲಿ ಕೆಲಸ ಮಾಡಲು ಇಚ್ಚಿಸುವ ವೈದ್ಯರು ಯಾವದೇ ಗಡವು ಇಲ್ಲದೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ನೇರ ನೇಮಕಾತಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 29 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 7 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, 2 ಗಿರಿಜನರ ಸಂಚಾರಿ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಸುಮಾರು 66 ಶುಶ್ರೂಶಕರಿದ್ದು (ಸ್ಟಾಫ್ ನರ್ಸ್) ಕೊರತೆ ನೀಗಲಾಗಿದೆ. ವೀರಾಜಪೇಟೆ ಯಲ್ಲಿ ಎಕ್ಸ್ರೇ ತಜ್ಞ ಅಮಾನತು ಗೊಂಡ ನಂತರ ಮರು ನೇಮಕಾತಿ ಯಾಗದೆ ತೊಂದರೆ ಅನುಭವಿಸು ವಂತಾಗಿದೆ. ಖಾಸಗಿಯಾಗಿ ಬಡವರ್ಗದವರು ಸುಮಾರು ರೂ.600 ಶುಲ್ಕಪಾವತಿಸಿ ಎಕ್ಸ್ರೆ ತೆಗೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಜಿ.ಪಂ.ಸದಸ್ಯ ಅಚ್ಚಪಂಡ ಮಹೇಶ್ ಅವರು ಮಾತನಾಡಿ, ಆಯುರ್ವೇದ ವೈದ್ಯರನ್ನು ನಡೆದಾಡುವ ದೇವರೆಂದು ಕರೆಯಲಾಗುತ್ತದೆ. ಕೊಡಗಿಗೆ ಆಯುರ್ವೇದ ವೈದ್ಯರ ತಂಡ ಕಾಲಿಡುತ್ತಿದ್ದಂತೆಯೇ ಉತ್ತಮ ಮಳೆಯಾಗಿದೆ. ಇಂಗ್ಲೀಷ್ ಔಷಧಿ ಸೇವನೆಯಿಂದಾಗಿ ಒಂದು ಕಾಯಿಲೆಗೆ ಮತ್ತೊಂದು ಕಾಯಿಲೆಯನ್ನು ನಮಗೆ ಗೊತ್ತಿಲ್ಲದೆಯೇ ಬಳುವಳಿಯಾಗಿ ಹೊಂದಿಕೊಳ್ಳುತ್ತಿದ್ದೇವೆ. ಇದೀಗ ಮತ್ತೆ ಪುರಾತನ ಪದ್ಧತಿಯತ್ತ ವಿದೇಶಿಯರೂ ಒಳಗೊಂಡಂತೆ ಎಲ್ಲರೂ ನಂಬಿಕೆ ಇಡುತ್ತಿದ್ದಾರೆ. ಮಾಕುಟ್ಟ ವ್ಯಾಪ್ತಿಯಲ್ಲಿ ಮಾರಕ ರೋಗ ಕ್ಯಾನ್ಸರ್, ಏಡ್ಸ್, ಅಬೋಲಾ ಕಾಯಿಲೆಗಳಿಗೂ ಔಷಧಿ ಇರಬಹುದು.ಇದನ್ನು ಪತ್ತೆಹಚ್ಚುವ ಕೆಲಸವನ್ನು ವೈದ್ಯರ ತಂಡ ಮಾಡಬೇಕಾಗಿದೆ. ಇದೊಂದು ಉತ್ತಮ ಕಾರ್ಯಕ್ರಮ ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಮಾಕುಟ್ಟ ವಲಯಾರಣ್ಯಾಧಿಕಾರಿ (ಉರ್ಟಿ) ಪೌಲ್ ಅಂತೋಣಿ ಅವರು ಬೃಹ್ಮಗಿರಿ ವನ್ಯಜೀವಿ ವಲಯದ ಗುಣ ವಿಶೇಷತೆಗಳನ್ನು ವಿವರಿಸಿದರು. ಬೇಟೋಳಿ ಗ್ರಾ.ಪಂ. ಸದಸ್ಯ ಕೆ.ಕೆ.ಉಮ್ಮರ್, ಸರ್ಕಾರಿ ಶಾಲಾ ಶಿಕ್ಷಕರಾದ ಸಜೇಶ್ಕುಮಾರ್, ಭಾಸ್ಕರ್, ಫಾರೆಸ್ಟರ್ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಸಂಯೋಜಕ ಟಿ.ಎಲ್. ಶ್ರೀನಿವಾಸ್ ಸ್ವಾಗತ ಹಾಗೂ ಡಾ. ಅಭಿಜ್ಞಾ ನರಸಿಂಹನ್ ವಂದಿಸಿದರು.
ಹಿಮಾಲಯದಲ್ಲಿ ಕಾಣಸಿಗುವ ಸಸ್ಯಪ್ರಭೇದ ಪತ್ತೆ
ಕ್ಯಾನ್ಯರ್ ಮಾರಕ ರೋಗವನ್ನು ಗುಣಪಡಿಸುವ ಹಿಮಾಲಯ ಪರ್ವತದಲ್ಲಿ ಮಾತ್ರಾ ಕಾಣಸಿಗುವ ‘ಬಲ್ಲಾತಕ್’ ಔಷಧಿ ಸಸ್ಯ ಪ್ರಭೇದವು ವಿನಾಶದ ಅಂಚಿನಲ್ಲಿದ್ದು ಮಾಕುಟ್ಟ ಬೃಹ್ಮಗಿರಿ ವಲಯದಲ್ಲಿ ಸುದೀರ್ಘ 16 ಕಿ.ಮೀ. ಚಾರಣ ಸಂದರ್ಭ ಆಯುರ್ವೇದ ವೈದ್ಯರ ತಂಡ ಪತ್ತೆಹಚ್ಚಿದೆ. ಶಾಲ್ಮಲಿ, ಕಾಡುನಿಂಬೆ, ಕಾಚಂಪುಳಿ, ಪುನರ್ಪುಳಿ, ಬೂರುಗ, ಅಂಟವಾಳಕಾಯಿ, ಕಾಡುನೆಲ್ಲಿ, ಚಂದನ, ನೀಲಿಮರ, ಕುರ್ಚಿ ಮುಂತಾದ ಔಷಧಿಯುಕ್ತ ಸಸ್ಯ ಪ್ರಭೇದಗಳನ್ನು ಗುರುತುಹಚ್ಚಿದರು. ಇಷ್ಟೇ ಅಲ್ಲದೆ ಅಪೂರ್ವ ಗಿಡಮೂಲಿಕೆಗಳಿದ್ದು ಭವಿಷ್ಯದಲ್ಲಿ ಎಲ್ಲವನ್ನು ದಾಖಲೀಕರಣ ಮಾಡಿಕೊಳ್ಳುವ ಉದ್ಧೇಶವಿದೆ ಎಂದು ಡಾ. ಸುಜಿತ್ ರೆಡ್ಡಿ, ಡಾ. ವಿಜಯಲಕ್ಷ್ಮಿ ತಿಳಿಸಿದರು. ಇದೇ ಸಂದರ್ಭ ಗುಜರಾತ್ ಮೂಲದ ನೇಹಾ ಪಾಂಡೆ ನೀಲಿ ಮರವನ್ನು ಅಪ್ಪಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದರು.
ಬೆಳಿಗ್ಗೆ 9 ಗಂಟೆಗೆ ಚಾರಣ ತೆರಳಿದ ತಂಡ ಸುಮಾರು 16 ಕಿ.ಮೀ.ಕಾಲ್ನಡಿಗೆಯಲ್ಲಿಯೇ ಸಾಗಿ ಅಪರಾಹ್ನ 3.30 ಗಂಟೆಗೆ ಹಿಂತಿರುಗಿತು. ಇದು ತಮ್ಮ ಜೀವನದಲ್ಲಿಯೇ ಅದ್ಭುತ ಅನುಭವ ನೀಡಿದೆ. ಮಾಕುಟ್ಟ ಸಸ್ಯಕಾಶಿಯನ್ನು ಮರೆಯಲು ಅಸಾಧ್ಯ. ಮುಂದೆ ಅವಕಾಶ ಸಿಕ್ಕಿದ್ದಲ್ಲಿ ಮತ್ತೆ ಬರುವದಾಗಿ ವೈದ್ಯರ ತಂಡ ತಿಳಿಸಿದೆ. ಕೇರಳದ ಭಾಗದ ಸುಮಾರು ರೂ.220 ಕೋಟಿ ವೆಚ್ಚದ ಜಲ ವಿದ್ಯುತ್ ಯೋಜನೆ, ಸೊಳ್ಳೆಕೊಲ್ಲಿಯಲ್ಲಿ ಬರಪೆÇಳೆಗೆ ಅಡ್ಡಲಾಗಿ ನಿರ್ಮಿಸಿದ ತೂಗು ಸೇತುವೆಯನ್ನು ಇದೇ ಸಂದರ್ಭ ವೀಕ್ಷಣೆ ಮಾಡಿದರು.