ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ

ಮಡಿಕೇರಿ, ಆ. 20: ರಾಷ್ಟ್ರೀಯ ವಾದ ಮಂಡಿಸುವ ಮಂದಿ ಹತ್ಯೆಗೊಳಗಾಗುತ್ತಿದ್ದು, ಕೊಡಗು ದೇಶ ವಿರೋಧಿಗಳ ಅಡಗುತಾಣ ಎಂಬ ಕುಖ್ಯಾತಿಗೆ ಒಳಗಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಅವರು ಇಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ ಟಿಪ್ಪು ದೌರ್ಜನ್ಯ ವಿಧಿಸಿದ ಕುಟ್ಟಪ್ಪ ಕೊಲೆಯಾದರು. ಸಂಕಲ್ಪ ಯಾತ್ರೆ ಮುಗಿಸಿ ಮರಳುತ್ತಿದ್ದ ಪ್ರವೀಣ್ ಪೂಜಾರಿಯನ್ನು ಕತ್ತು ಕುಯ್ದು ಕೊಲ್ಲಲಾಯಿತು. ಇಲ್ಲಿ ಸರಕಾರ ದುರುಳರಿಗೆ ಶ್ರೀರಕ್ಷೆ ನೀಡುತ್ತಿದೆ ಎಂಬ ಧೈರ್ಯ ಬಂದಿದ್ದು ರಾಷ್ಟ್ರವಾದಕ್ಕೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎಂಬ ಸ್ಥಿತಿ ಬಂದಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳು ಸಂವಿಧಾನವನ್ನು ಗೌರವಿಸುವದಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಇದೀಗ ಸಂವಿಧಾನಕ್ಕೆ ಸವಾಲೆಸೆದು, ದೇಶ ದ್ರೋಹದ ಘೋಷಣೆ ಕೂಗುತ್ತಿರುವವರನ್ನು ಬಂಧಿಸದೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ದೂರಿದರು. ಇದೀಗ ರಾಷ್ಟ್ರವಾದಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ಹೂಡುತ್ತಿರುವ ಕ್ರಮ ಪ್ರಶ್ನಿಸುವಂತಿದೆ ಎಂದರು. ಪೊಲೀಸ್ ಅಧಿಕಾರಿಗಳಾಗಿದ್ದ ಡಿ.ಕೆ. ರವಿ, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿ, ಜಗದೀಶ್, ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಲ್ಲಿ ಕಾನೂನು ರಕ್ಷಕರಿಗೆ ರಕ್ಷಣೆ ಇಲ್ಲ ಎಂಬದು ರುಜುವಾತಾಗಿದೆ ಎಂದರು.

ಕೊಡಗಿನಲ್ಲಿ ಆಗಂತುಕರು ಬಂದು ನೆಲೆಸುತ್ತಿದ್ದು, ಬೆಳೆಗಾರರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ಕಾಫಿ ತೋಟ ಖರೀದಿಗೆ, ಲೀಜಿಗೆ, ಕೆಲಸಕ್ಕೆಂದು ಬರುವವರಲ್ಲಿ ದೇಶ ದ್ರೋಹಿಗಳೂ ಬಂದು ನೆಲೆಸುವ ಸಾಧ್ಯತೆಯಿದ್ದು, ವಿವೇಚನಾ ರಹಿತ ಜಾಗ ಮಾರಾಟ ಹಾಗೂ ತೀರ್ಮಾನಗಳಿಂದ ಉಂಟಾಗಬಹುದಾದ ಅನಾಹುತಗಳಿಗೆ ಬೆಳೆಗಾರರೂ ಹೊಣೆಯಾಗಬೇಕಾಗಬಹುದು ಎಂದು ಪ್ರತಾಪ್ ಸಿಂಹ ಕಳಕಳಿ ವ್ಯಕ್ತಪಡಿಸಿದರು.

ಕಾಫಿ ವಿಧೇಯಕ

ನೂತನ ಕಾಫಿ ವಿದೇಯಕ ಬದಲಾವಣೆಗೆ ಅವಕಾಶವಿದ್ದು, ಬೆಳೆಗಾರರು ಸೂಚಿಸಿದರೆ ಅವಶ್ಯಕ ಬದಲಾವಣೆ ಅಳವಡಿಸಬಹುದು ಎಂದು ಪ್ರತಾಪ್ ಸಿಂಹ ಹೇಳಿದರು. ಕಾಫಿ ಬೋರ್ಡಿನಲ್ಲಿ ಅನನುಭವಿ ಅಧಿಕಾರಿಗಳು ಅಧ್ಯಕ್ಷರಾಗುವದನ್ನು ತಪ್ಪಿಸಿ ಬೆಳೆಗಾರರನ್ನೇ ನೇಮಕ ಮಾಡುವದಾಗಿ ತಿಳಿಸಿದರು. ಬೆಳೆಗಾರ ಅಧ್ಯಕ್ಷನಾದರೂ ಆಡಳಿತ ಕಾರ್ಯದರ್ಶಿಯ ಕೈಗೆ ನೀಡಲಾಗುತ್ತಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಭೆಯಲ್ಲಿ ಅಧ್ಯಕ್ಷರು ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.