*ಗೋಣಿಕೊಪ್ಪಲು, ಜ. 27: ಅರುವತ್ತೊಕ್ಕಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಬಿ.ಯು. ಯಷಿಕಾ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.ಕೊಕ್ಕಲೆಮಾಡ ಮುತ್ತಣ್ಣ ಹಾಗೂ ಪಾರುವಂಗಡ ಜಿ ಕರುಂಬಯ್ಯ ದತ್ತಿನಿಧಿ ಭಾವಗೀತೆ ಸ್ಪರ್ಧೆ ನಡೆಯಿತು. ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮಹಮದ್ ಆಲಿ ದ್ವಿತೀಯ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಮೃತ ಮತ್ತು ಅರುವತ್ತೊಕ್ಕಲು ಸರ್ವ ದೈವತಾ ಪದವಿ ಪೂರ್ವ ಕಾಲೇಜಿನ ಚಿರಾಗ್‍ಶರ್ಮ ತೃತೀಯ ಸ್ಥಾನವನ್ನು ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ವೀರಾಜಪೇಟೆಯ ಹಿರಿಯ ವಕೀಲ ಎಂ.ಎಸ್. ಪೂವಯ್ಯ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವದು ಬಹಳ ಕಷ್ಟವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ನಗರದ ಕಡೆಗೆ ವಾಲುತ್ತಿರುವದರಿಂದ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವೀರಾಜಪೇಟೆ ಪ್ರಗತಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ತುಂಗಾ ಪೂವಯ್ಯ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರಗತಿ ಮತ್ತು ಬೆಳವಣಿಗೆಗಾಗಿ ದತ್ತಿ ದಾನಿಗಳು ಶಿಕ್ಷಣ ಸಂಸ್ಥೆಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಮುಂದೆ ಬಂದು ಇದರ ಫಲ ಪಡೆದುಕೊಳ್ಳಬೇಕು ಎಂದು ಹೇಳಿದರು.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದತ್ತಿ ದಾನಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಕಾಯಮಾಡ ಬಿ, ರಾಜ ಅಧ್ಯಕ್ಷತೆ ವಹಿಸಿದ್ದರು.ಸಹ ಕೋಶಾಧಿಕಾರಿ ಆಲೆಮಾಡ ಕರುಂಬಯ್ಯ, ಸಹ ಕಾರ್ಯದರ್ಶಿ ಪೋಡಮಾಡ ಮೋಹನ್, ಆಕಾಶವಾಣಿ ಕಲಾವಿದೆ ವತ್ಸಲಾ ನಾರಾಯಣ, ಚಂದ್ರಕಲಾ ಹಾಜರಿದ್ದರು. ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ ಸ್ವಾಗತಿಸಿ, ಉಪನ್ಯಾಸಕ ಡಾ.ಜೆ. ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಕೆ. ಪ್ರಭು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಾದ ಜುಬೇರಿಯಾ, ಸಾಜಿದ ನಿರೂಪಿಸಿ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ವಂದಿಸಿದರು.