ವೀರಾಜಪೇಟೆ, ಡಿ. 27: ದಕ್ಷಿಣ ಕೊಡಗಿನ ಕೊಂಗಣ ಹೊಳೆ ನೀರನ್ನು ಹೊರ ಜಿಲ್ಲೆಗಳಿಗೆ ಹರಿಸುವ ಯೋಜನೆಗೆ ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ರೈತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ನೋಟು ನಿಷೇಧ ಯೋಜನೆ, ಬರಗಾಲದಿಂದ ಬೆಳೆಗಾರರು ಬೇಸತ್ತಿದ್ದು ಕೊಡಗಿನಲ್ಲಿ ಕಾಫಿü ಖರೀದಿಸಲು ಖರೀದಿದಾರರು ಹಿಂದೇಟು ಹಾಕುತ್ತಿರುವದರಿಂದ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿರುವದು ನೋವಿನ ಸಂಗತಿ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ಮೇಲೆ ಜನತೆಗೆ ನಂಬಿಕೆ ಬರಬೇಕಾದರೆ ಸರಕಾರ ಜನಪರ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು. ಇದಕ್ಕೆ ಸರಕಾರದ ಪಾರದರ್ಶಕತೆಯ ಆಡಳಿತ ಇದ್ದರೆ ಸಫಲತೆ ಸಾಧ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಗ್ರಾಮ ವಾಸ್ತವ್ಯದಿಂದ ಗ್ರಾಮದ ಅಭಿವೃದ್ಧಿಯೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿತ್ತು. ಇಪ್ಪತ್ತು ತಿಂಗಳ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ರೈತರಿಗೆ ಎಲ್ಲ ಕ್ಷೇತ್ರಗಳಲ್ಲಿ ಉತ್ತೇಜನ ನೀಡಲಾಗಿತ್ತು. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಅಧಿಕವಾಗಿದೆ. ರೈತರ ಸಮಸ್ಯೆಯನ್ನು ಕೇಳುವವರೇ ದಿಕ್ಕಿಲ್ಲದಂತಾಗಿದೆ ಕೊಡಗಿನಲ್ಲಾಗುತ್ತಿ ರುವ ಕಾಡಾನೆ ಧಾಳಿ ಅಮಾಯಕರ ಸಾವಿನ ವಿರುದ್ಧ ಪಕ್ಷ ನಿರಂತರವಾಗಿ ಹೋರಾಟ ನಡೆಸಿದ ಪ್ರತಿಫಲವಾಗಿ ರಾಜ್ಯ ಸರಕಾರ, ಕಾಡಾನೆ ಧಾಳಿ ಬೆಳೆ ನಷ್ಟದ ಪರಿಹಾರವನ್ನು ಕೊಡಗು ಜಿಲ್ಲೆ ವ್ಯಾಪ್ತಿಗೆ ಪರಿಷ್ಕರಿಸಿ ಹೆಚ್ಚಿಸಿರುವದು ಪಕ್ಷದ ಹೋರಾಟಕ್ಕೆ ತಂದ ಜಯ.

ಈಗಾಗಲೇ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 25000 ಸದಸ್ಯರುಗಳನ್ನು ನೋಂದಣೆ ಮಾಡುವ ಕಾರ್ಯಕ್ಕೆ ಮುಂದಿನ ಜನವರಿ ಎರಡನೇ ವಾರದಲ್ಲಿ ಚಾಲನೆ ನೀಡಲಾಗುವದು. ಕೊಡಗಿನಲ್ಲಿ ಜನತಾ ದಳ ಪಕ್ಷದ ಮೇಲೆ ಜನರಿಗೆ ಉತ್ತಮ ಭಾವನೆಗಳಿವೆ. ಮುಂದಿನ ಚುನಾವಣೆ ಯಲ್ಲಿ ಈ ಭಾವನೆಗಳು ಪಕ್ಷಕ್ಕೆ ಮತವಾಗಿ ಪರಿಣಮಿಸಲಿವೆ. ಕೊಡಗಿನ ಎರಡು ಕ್ಷೇತ್ರಗಳಲ್ಲಿ ಪಕ್ಷದ ಮೇಲೆ ಜನರ ಒಲವಿದ್ದು ಎರಡು ಕ್ಷೇತ್ರ ಗಳು ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಪಾಲಾಗಲಿದೆ. ಪಕ್ಷದ ಮಾಜಿ ಸಚಿವ ಜೀವಿಜಯ ಅವರ ಮಾರ್ಗದರ್ಶನ ದಲ್ಲಿ ಪಕ್ಷ ಬಲಿಷ್ಠ ಸಂಘಟನೆಯತ್ತ ಸಾಗಲಿದೆ ಎಂದು ಹೇಳಿದರು.

ತಾಲೂಕು ಸಮಿತಿ ಅಧ್ಯಕ್ಷ ಎಂ.ಸಿ.ಬೆಳ್ಯಪ್ಪ ಮಾತನಾಡಿ ಇಂದಿನ ಯುವಶಕ್ತಿ ರಾಜ್ಯದ ಆಡಳಿತವನ್ನು ಬಯಸಿದೆ. ಈ ಬಾರಿ ಚುನಾವಣೆ ಯಲ್ಲಿ ರಾಜ್ಯದಲ್ಲಿ ಸರಕಾರದ ಬದಲಾವಣೆ ಖಚಿತ ಎಂದರು.

ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ರೈತರ ಸರ್ವನಾಶವಾಗುತ್ತಿದೆ. ಇದನ್ನು ತಡೆಯಲು ಜನತಾ ದಳ ಪಕ್ಷದಿಂದ ಸಾಧ್ಯ. ಜಿಲ್ಲಾಧಿಕಾರಿ ಬೋರ್‍ವೆಲ್ ತೆಗೆಯಲು ನಿರ್ಬಂಧ ವಿಧಿಸಿರುವದನ್ನು ಹಿಂತೆಗೆದುಕೊಂಡು ಗದ್ದೆ ತೋಟಗಳಿಗೆ ನೀರು ಹಾಯಿಸಲು ಬೆಳೆಗಾರರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್. ಮತೀನ್, ಪಕ್ಷದ ಮುಖಂಡರುಗಳಾದ ತಿತೀರ ಮಂದಣ್ಣ, ಎಚ್.ಜಿ.ಗೋಪಾಲ್ ಇತರರು ಉಪಸ್ಥಿತರಿದ್ದರು.