ಗೋಣಿಕೊಪ್ಪಲು,ಡಿ.29: ದಕ್ಷಿಣ ಕೊಡಗಿನ ಕೊಂಗಣ ನದಿಯ ನೀರನ್ನು ಲಕ್ಷ್ಮಣತೀರ್ಥ ನದಿ ಮೂಲಕ ಹುಣಸೂರಿಗೆ ಕೊಂಡೊಯ್ಯುವ ಪ್ರಸ್ತಾಪದ ಕುರಿತು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮೈಸೂರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ವಿವರ, ಮಾಹಿತಿ ಸಂಗ್ರಹಿಸಿದ್ದಾರೆ.

ಕೊಂಗಣ ನದಿ ನೀರಿಗೆ ಕಟ್ಟೆ ಕಟ್ಟಲಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರನ್ನು ಸಂಪರ್ಕಿಸಿದ ಹೋರಾಟ ಸಮಿತಿಯ ಪ್ರಮುಖ ಬಿ.ಶೆಟ್ಟಿಗೇರಿಯ ಗ್ರಾ.ಪಂ. ಅಧ್ಯಕ್ಷ ಕಡೇಮಾಡ ಅಶೋಕ್ ಚಿಟ್ಟಿಯಪ್ಪ ಹಾಗೂ ಬೇಗೂರು ಗ್ರಾಮಸ್ಥರು ಇತ್ತೀಚೆಗೆ ಚರ್ಚೆ ನಡೆಸಿದ್ದರು.

ಅಣೆಕಟ್ಟೆ ಕಟ್ಟುವ ವಿಚಾರದಲ್ಲಿ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ಇರುವದರಿಂದ ಇದರ ಸಾಧಕ-ಭಾದಕ ವಿಚಾರವನ್ನು ಖುದ್ದು ರೈತ ಸಂಘ ಅರಿತು ಮಾಹಿತಿ ಸಂಗ್ರಹಿಸಲು ಹೋರಾಟ ಸಮಿತಿ ಪ್ರಮುಖರು ಅವಕಾಶ ಕಲ್ಪಿಸಿದ್ದರು. ಈ ಬಗ್ಗೆ ರೈತ ಸಂಘ ಮೈಸೂರು ಹಾಗೂ ಹುಣಸೂರಿನ ಕಾವೇರಿ ಜಲಾನಯನ ಮಂಡಳಿ ಹಾಗೂ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಕೊಂಗಣ ನದಿಯು ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಸಮೀಪ ಬಿಟ್ಟಂಗಾಲ ಬೆಟ್ಟದಲ್ಲಿ ಹುಟ್ಟಿ ಸಮೀಪದ ಅಂಬಟ್ಟಿ , ಹೊಸಕೋಟೆ, ಬಿಟ್ಟಂಗಾಲ ಮೂಲಕ ಕೊಳತ್ತೋಡು ಮಾರ್ಗವಾಗಿ

(ಮೊದಲ ಪುಟದಿಂದ) ಕಂಡಂಗಾಲ, ಹಳ್ಳಿಗಟ್ಟು ಬಿ.ಶೆಟ್ಟಿಗೇರಿ ಮೂಲಕ ಕೆಕೆಆರ್ (ಕಕ್ಕಟ್ಟು-ಕೊಂಗಣ ಹೊಳೆ)ನಲ್ಲಿ ಸೇರಿ ನಂತರ ಕೂಟಿಯಾಲ ಸೇತುವೆ ಸಮೀಪ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರವೇಶಿಸಿ ಬರಪೊಳೆಯಲ್ಲಿ ಸಂಗಮವಾಗುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ಹರಿದು ನೆರೆಯ ಕೇರಳವನ್ನು ಮಾಕುಟ್ಟ-ಕೂಟುಹೊಳೆ ಸಮೀಪ ಸೇರುವಾಗ ನೀಲಂಬೊಳೆ ಎಂದು ಕರೆಯಲಾಗುತ್ತದೆ.

ಕುಂದ ಬೆಟ್ಟದಿಂದ ಹುಟ್ಟಿ ಹರಿದು ಬರುವ ಕೊಲ್ಲಿತೋಡು ನೀರು ಹಳ್ಳಿಗಟ್ಟುವಿನಲ್ಲಿರುವ ಕೆರೆ ಸಮೀಪ ಹರಿದು ಬೇಗೂರು, ಬಲ್ಯಮುಂಡೂರು ಮುಖಾಂತರ ಲಕ್ಷ್ಮಣತೀರ್ಥ ನದಿಗೆ ಸೇರುತ್ತದೆ. ಕೊಂಗಣ ನದಿಗೆ ಹಳ್ಳಿಗಟ್ಟು ಕೆರೆ ಸಮೀಪÀ 4.5ಮೀಟರ್ ಎತ್ತರದ ಕಟ್ಟೆ ಕಟ್ಟಿ ಕೊಲ್ಲಿತೋಡುವಿಗೆ ಸೇರಿಸಿ ಸುಮಾರು 15ಕಿ.ಮೀಟರ್‍ನಷ್ಟು ದೂರ ಕಾಲುವೆ( ಕೊಳವೆ) ಮೂಲಕ ಲಕ್ಷ್ಮಣ ತಿರ್ಥ ನದಿಗೆ ಬಲ್ಯಮಂಡೂರುವಿನಲ್ಲಿ ಸೇರ್ಪಡೆಗೊಳಿಸಿ ಮುಂದಕ್ಕೆ ಕುಡಿಯುವ ನೀರನ್ನು ಮುಂಗಾರು ಮಳೆಯ 4 ತಿಂಗಳಲ್ಲಿ ಹುಣಸೂರು, ಮೈಸೂರು ,ಮಂಡ್ಯ, ಹಾಗೂ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ಎಂದು ಸರ್ಕಾರದ ಅಧಿಕೃತ ಸಮೀಕ್ಷಾ ವರದಿಯನ್ನು ಆಧರಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಾರ್ಗದಲ್ಲಿ ಅನಾವಶ್ಯಕವಾಗಿ ಹರಿಯುತ್ತಿರುವ ನದಿ ನೀರನ್ನು ಬಳಕೆ ಮಾಡಿಕೊಳ್ಳುವ ಸಂದರ್ಭ ರೈತರ ಕನಿಷ್ಟ ಭೂಮಿಗಾಗಲಿ, ಪರಿಸರಕ್ಕಾಗಲಿ, ಯಾವದೇ ಹಾನಿ ಇಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ. ಅನಾವಶ್ಯಕವಾಗಿ ಪೆÇೀಲಾಗುತ್ತಿರುವ ನೀರನ್ನು ಬಳಕೆ ಮಾಡಿಕೊಳ್ಳಲಾಗುವ ಉದ್ದೇಶದಿಂದ ನದಿ ನೀರು ಹರಿಯಲು ಎರಡು ಬದಿಗಳನ್ನು ಸರಿಪಡಿಸಲಾಗುವದು. ಈ ಸಂದರ್ಭ ರೈತರ ಭೂಮಿಗೆ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂಬ ವಿವರಗಳನ್ನು ನೀಡಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಸಿ.ಎಂ. ಸುರೇಶ್, ಇಂಜಿನಿಯರ್ ಶ್ರೀನಿವಾಸ್‍ರವರು ಸಮಗ್ರ ಯೋಜನಾ ವರದಿಯನ್ನು (ಡಿ.ಪಿ.ಆರ್.)ಅನ್ನು ಸರ್ಕಾರಕ್ಕೆ ನೀಡಿದ್ದು, ಸರ್ವೆ ಕಾರ್ಯಕ್ಕೆ ಆದೇಶ ನೀಡಿದೆ, ಅದರಂತೆ ಇನ್ನೂ ಸರ್ವೆ ಕಾರ್ಯ ಮುಂದೆ ನಡೆಯಬೇಕಾಗಿದೆ ಎಂದು ಸ್ಪಷ್ಟ ಪಡಿಸಿದರು.

ಇದೇ ಸಂದರ್ಭ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಈಗಾಗಲೇ ಕೊಡಗಿನ ಪರಿಸರದ ಮೇಲೆ ಆಗಿಂದಾಗ್ಗೆ ಹಲವು ಯೋಜನೆ ಅನುಷ್ಟಾನದ ನೆಪದಲ್ಲಿ ಗದಾ ಪ್ರಹಾರ ನಡೆದುಕೊಂಡು ಬಂದಿದೆ. ರೈತರು, ಕೃಷಿಕರು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ರೈತರಿಗೆ ತೊಂದರೆಯಾದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ. ಕೊಡಗು ಕೊಡಗಾಗಿಯೇ ಉಳಿಯಬೇಕು. ಜಿಲ್ಲೆಗೆ ಮಾರಕವಾಗುವ ಯೋಜನೆಗೆ ರೈತ ಸಂಘ ವಿರೋಧವಿದೆ ಎಂಬ ಅಂಶವನ್ನು ಅಧಿಕಾರಿಗಳಿಗೆ ಸ್ಪಷ್ಟ ಪಡಿಸಿದರು.

ನೀರನ್ನು ಪಡೆದುಕೊಳ್ಳುವ ವಿಚಾರದ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕರ ಮುಂದೆ ದಾಖಲಾತಿಯೊಂದಿಗೆ ‘ಪವರ್ ಪಾಯಿಂಟ್ ಪ್ರೊಜೆಕ್ಟರ್’ ಮೂಲಕ ಸಾರ್ವಜನಿಕರಿಗೆ ಸಭೆಯಲ್ಲಿ ಸಂಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನೀರಾವರಿ ನಿಗಮದ ಇಲಾಖಾಧಿಕಾರಿಗಳು ಲಭ್ಯವಿರುವ ಮಾಹಿತಿಗಳನ್ನು ಸಾರ್ವಜನಿಕರ ಮುಂದೆ ಪ್ರ್ರಾಮಾಣಿಕವಾಗಿ ಮಂಡಿಸುವುದಾಗಿ ತಿಳಿಸಿದರು. ಜಿಲ್ಲೆಯ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಗ್ರಾಮಸ್ಥರು ಕೊಂಗಣ ನದಿಗೆ ಅಣೆಕಟ್ಟೆ ಕಟ್ಟುತ್ತಿರುವ ವಿಚಾರದಲ್ಲಿ ವಿರೋಧ ಮಾಡುತ್ತಿರುವದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಭಾಗದ ದಕ್ಷಿಣ ಕೊಡಗಿನ ಎಲ್ಲಾ ಗ್ರಾ.ಪಂ.ಗಳಿಗೂ ಉದ್ದೇಶಿತ ಯೋಜನೆಯಿಂದ ಪ್ರಯೋಜನವಾಗುವದಿದ್ದರೆ ಮಾತ್ರ್ರ ಸ್ಥಳೀಯರ ಬೆಂಬಲ ಸಿಗಲಿದೆ ಎನ್ನಲಾಗುತ್ತಿದೆ.

-ವರದಿ: ಟಿ.ಎಲ್.ಶ್ರೀನಿವಾಸ್