ಗೋಣಿಕೊಪ್ಪಲು, ಡಿ. 27: ಕೊಂಗಣ ನದಿಗೆ ಅಣೆಕಟ್ಟು ನಿರ್ಮಿಸಿ ಹೊರ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆಯಿಂದ ಬಿ. ಶೆಟ್ಟಿಗೇರಿ, ಕುಂದ ಹಾಗೂ ಹುದಿಕೇರಿ ಗ್ರಾಮಗಳು ಮುಳುಗಡೆಯಾಗಲಿದ್ದು, ಈ ಯೋಜನೆಯನ್ನು ಕೈಬಿಡಬೇಕೆಂದು ಕುತ್ತ್‍ನಾಡ್ - ಬೇರಳಿನಾಡ್ ಬೆಳೆಗಾರರ ಸಂಘದ ಅಧ್ಯಕ್ಷ ತೀತಿಮಾಡ ಲಾಲಾ ಭೀಮಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಗ್ರಾಮಗಳನ್ನು ಮುಳುಗಿಸಿ ಹೊರ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆಯ ಅವಶ್ಯಕತೆ ಇಲ್ಲ. ಗ್ರಾಮ ಪಂ. ತಾ.ಪಂ. ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಇಂತಹ ಯೋಜನೆಗಳ ವಿರುದ್ಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ.

ಕೊಲ್ಲಿತೋಡು ಯೋಜನೆ ಎಂದು ಸರ್ಕಾರ ಇದನ್ನು ಅನುಷ್ಠಾನಗೊಳಿಸಲು ಮುಂದಾಗಿತ್ತು. ಆದರೆ ಇಲ್ಲಿನ ವಿರೋಧದಿಂದ ರದ್ದಾಗಿತ್ತು. ಪುನಃ ಅದೇ ಯೋಜನೆಯನ್ನು ಕೊಂಗಣ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವದು ಖಂಡನಾರ್ಹ ಎಂದರು.

ಕೊಂಗಣ ಹೊಳೆಯಲ್ಲಿ ಬೇಸಿಗೆಯಲ್ಲಿ ಸಣ್ಣ ಪ್ರಮಾಣದ ನೀರು ಮಾತ್ರ ಸಿಗುತ್ತದೆ. ಈ ಯೋಜನೆ ಜಾರಿಗೆ ಬಂದರೆ ನದಿಪಾತ್ರದ ಗ್ರಾಮಗಳಾದÀ ಕುಂದ, ಈಚೂರು, ಹಳ್ಳಿಗಟ್ಟು, ಬಿ. ಶೆಟ್ಟಿಗೇರಿ, ಕೊಂಗಣ, ಕುಟ್ಟಂದಿ, ಬೇಗೂರು ಹಾಗೂ ಹೈಸೊಡ್ಲೂರು ಗ್ರಾಮಗಳಲ್ಲಿ ನೀರಿಲ್ಲದೆ ತೊಂದರೆ ಅನುಭವಿಸಲಿವೆ ಎಂದರು.

ಸಲಹೆಗಾರ ಮದ್ರೀರ ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ವರ್ಷ ಕಳೆದಂತೆ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ. ಕೊಡಗಿನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಇಂತಹ ಸಮಸ್ಯೆಗಳ ಮುಂದಾಲೋಚನೆ ಮೂಲಕ ಕೊಂಗಣ ಯೋಜನೆಗಳನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.