ಮಡಿಕೇರಿ, ಸೆ.6 : ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮದ ಶ್ರೀ ಸ್ವಾಗತ ಯುವಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೈಲು ಮುಹೂರ್ತ ಹಬ್ಬದ ಪ್ರಯುಕ್ತ ನಡೆದ ಕ್ರೀಡಾಕೂಟ ಮೇಕೇರಿ ಗ್ರಾಮದಲ್ಲಿ ಸಂಭ್ರಮವನ್ನು ಮೂಡಿಸಿತು.ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ, ನೆಹರೂ ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಮೇಕೇರಿ ರೋಟರಿ ಸಮುದಾಯ ದಳ ಮತ್ತು ಛತ್ರಪತಿ ಸ್ವಸಹಾಯ ಸಂಘ ಇವರ ಸಂಯುಕ್ತಾಶ್ರಯದಲ್ಲಿ 27ನೇ ವರ್ಷದ ಕೈಲು ಮುಹೂರ್ತ ಕ್ರೀಡಾಕೂಟ ಮೇಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಭಾರದ ಗುಂಡು ಎಸೆತ, ಓಟದ ಸ್ಪರ್ಧೆ, ಸ್ಲೋ ಬೈಕ್ ಮತ್ತು ಸೈಕಲ್ ರೇಸ್, ಪುರುಷ ಹಾಗೂ ಮಹಿಳೆಯರಿಗಾಗಿ ಹಗ್ಗಜಗ್ಗಾಟದ ಸ್ಪರ್ಧೆಗಳು ನಡೆದವು.
ಹಗ್ಗಜಗ್ಗಾಟ ಸ್ಫರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಸ್ವಾಗತ ಯುವಕ ಸಂಘ ತಂಡ ಜಯಶಾಲಿಯಾದರೆ, ಮಹಿಳೆಯರ ವಿಭಾಗದಲ್ಲಿ ಸುಭಾಷ್ ನಗರದ ತಂಡ ಗೆಲುವು ಸಾಧಿಸಿತು. ಕ್ರೀಡಾಕೂಟದ ಕೊನೆಯಲ್ಲಿ ನಡೆದ ಕೊಡವ ವಾಲಗ ನೃತ್ಯ ಸ್ಫರ್ಧೆ ಗಮನ ಸೆಳೆಯಿತು. ಇದೇ ಸಂದರ್ಭ ವೈವಿಧ್ಯಮಯ ಮನೋರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ವಹಿಸಿದ್ದರು.
ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ.ಜೋಯಪ್ಪ, ಮೇಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಮೇಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಚೋಡೀರ ಪ್ರಕಾಶ್, ಮಾದೆಯಂಡ ನಾಚಪ್ಪ, ಅರ್ಪಿತಾ ಸಂಧ್ಯಾ, ಅನಸೂಯ, ಮೇಕೇರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಸುಮಾವತಿ, ಮಡಿಕೇರಿ ರೋಟರಿ ಇನ್ನರ್ ವೀಲ್ ಅಧ್ಯಕ್ಷರಾದ ನಮಿತಾ ರೈ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷರು ಟಿ.ಎ.ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ ಅಧ್ಯಕ್ಷರಾದ ಹರೀಶ್, ಮಡಿಕೇರಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಕುಮುದಾ ರಶ್ಮಿ, ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತೋರೇರ ಉದಯ, ಮಡಿಕೇರಿ ಆದಿಶಕ್ತಿ ಮಹಿಳಾ ಸಂಘದ ಅಧ್ಯಕ್ಷರಾದ ಇಂದಿರಾ ರೈ ಉಪಸ್ಥಿತರಿದ್ದರು.