ಕುಡಿಯಲು ತೆರಳಿದ ಎರಡು ಆನೆಗಳು ಕೆರೆಯಲ್ಲಿ ಸಿಲುಕಿಕೊಂಡಿದ್ದವು. ಅರಣ್ಯ ಇಲಾಖೆ-ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಲ್ಲಿ ಎರಡು ಆನೆಗಳನ್ನು ಅಂದು ಕೆರೆಗಳಿಂದ ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಈ ನಡುವೆ ವಾಕಿಂಗ್ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಆನೆ ತಿವಿದು ಅಂಗ ಊನತೆಯೂ ಉಂಟಾಗಿತ್ತು.
ಒಂದು ಅಂದಾಜಿನ ಪ್ರಕಾರ 10 ರಿಂದ 15 ಪುಂಡಾನೆಗಳು ಗ್ರಾಮದಲ್ಲಿ ಕೃಷಿಕರ ನಿದ್ದೆಗೆಡಿಸಿದೆ. ಗ್ರಾಮಸ್ಥರ ಸಹನೆಯೂ ಕಟ್ಟೆ ಹೊಡೆದಿದೆ. ಅರಣ್ಯ ಇಲಾಖೆಗೆ ಇಲ್ಲಿನ ಗ್ರಾಮಸ್ಥರು 10 ದಿನಗಳ ಗಡವು ನೀಡಿದ್ದು, ಪುಂಡಾನೆಯನ್ನು ಸೆರೆ ಹಿಡಿದು ಸಾಕಾನೆ ಶಿಬಿರಕ್ಕೆ ಸಾಗಿಸದಿದ್ದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ತಿಳಿಸಿದ್ದಾರೆ. ಇಲ್ಲಿನ ಹಲವು ಕೃಷಿಕರಿಗೆ ಮಾನವೀಯ ದೃಷ್ಟಿಯಿಂದ ನೀಡಬೇಕಾದ ಅಗತ್ಯ ಪರಿಹಾರವನ್ನು ನೀಡದೆ ಇಲಾಖಾಧಿಕಾರಿಗಳು ಸತಾವಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಗೊಟ್ಟಡ ಹಾಗೂ ಕಳತ್ಮಾಡು ಗ್ರಾಮ ಪೆÇನ್ನಂಪೇಟೆ ಮತ್ತು ವೀರಾಜಪೇಟೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು ಇಲಾಖಾಧಿಕಾರಿಗಳು ತುರ್ತು ಕ್ರಮ ಜರುಗಿಸದಿದ್ದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವಲ್ಲಿಯೂ ಹಿಂಜರಿಯುವದಿಲ್ಲ ಎಂದು ಕಳೆದ 10 ವರ್ಷಗಳಿಂದ ಆನೆ ಉಪಟಳದಿಂದ ಬೇಸತ್ತ ಕೃಷಿಕರು ತಿಳಿಸಿದ್ದಾರೆ. ಕೊಡಂದೇರ ಚಂಗಪ್ಪ ಅವರು ಪ್ರತಿಕ್ರಿಯೆ ನೀಡಿ ತಾ. 16 ರಂದು ತನ್ನ ಕಾರಿಗೆ ಅಭಿಮುಖವಾಗಿ ಆನೆ ಬರತೊಡಗಿದಾಗ ತನ್ನ ಜೀವದ ಆಸೆ ತೊರೆದಿದ್ದೆ. ಈ ಹಂತದಲ್ಲಿ ವಿಧಿ ಇಲ್ಲದೆ ಕಾರು ನಿಲ್ಲಿಸಿದೆ. ಧಾಳಿ ಮಾಡಲು ಬಂದ ಕಾಡಾನೆ ಜೋರಾಗಿ ಘೀಳಿಡುತ್ತಾ ತನ್ನ ವಾಹನ ಸಮೀಪದಿಂದಲೇ ಮತ್ತೊಂದು ತೋಟಕ್ಕೆ ನುಸುಳಿಹೋಯಿತು. ತನಗೆ ಹಾಡಹಗಲೇ ಆದ ಕಹಿ ಅನುಭವ ಇದು. ಇದೇ ಸಂದರ್ಭ ಪಾದಚಾರಿಗಳು ಅಲ್ಲಿದ್ದರೆ ಏನು ಗತಿ? ಅರಣ್ಯ ಇಲಾಖೆ ಈ ವ್ಯಾಪ್ತಿಯ ಕೃಷಿಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ತಾನು ನಿವೃತ್ತ ಡಿಎಫ್ಓ ಪುತ್ರನಾಗಿದ್ದು, ಅರಣ್ಯ ಇಲಾಖೆಗೆ ಹಲವು ಬಾರಿ ಮೌಖಿಕವಾಗಿ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ತಮ್ಮ ನಿರಾಶೆ, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ ಅವರನ್ನೂ ಕಳತ್ಮಾಡು ವ್ಯಾಪ್ತಿಯಲ್ಲಿ ಆನೆ ಧಾಳಿ ಮಾಡಿ ಹತ್ಯೆಗೈಯಲು ಮುಂದಾಗಿತ್ತು. ಈ ಹಂತದಲ್ಲಿ ಕಳತ್ಮಾಡು ವ್ಯಾಪ್ತಿಯ ತೋಟ ಮಾಲೀಕರು ಅಧಿಕಾರಿಯ ಜೀವ ರಕ್ಷಣೆ ಮಾಡಿದ್ದರು. ಇಂತಹ ಹಲವು ಕಹಿ ಘಟನೆಗಳು ಮರುಕಳಿಸುತ್ತಾ ಇದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದುವರಿದಿದೆ. ಇಲ್ಲಿನ ಆನೆ-ಮಾನವ ಸಂಘರ್ಷ ಗಂಭೀರವಾಗುತ್ತಿದೆ. ದಿನೇ ದಿನೇ ಇಲ್ಲಿನ ಗ್ರಾಮಸ್ಥರು ಕಾಡಾನೆಗಳ ಭಯದಿಂದ ಚಡಪಡಿಸುತ್ತಿದ್ದರೂ ಇಲಾಖಾಧಿಕಾರಿಗಳು ನಿದ್ರಾವಸ್ಥೆಯಲ್ಲಿರುವದು ಕೃಷಿಕರ ಅಸಮಾಧಾನಕ್ಕೆ ಕಾರಣವಾಗಿದೆ.
- ಟಿ.ಎಲ್. ಶ್ರೀನಿವಾಸ್