ಮಡಿಕೇರಿ, ಆ.31 : ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಕಾರ್ಮಿಕ ಸಂಘಟನೆಗಳು ಸೆ. 2 ರಂದು ಮುಷ್ಕರ ನಡೆಸಲು ನಿರ್ಧರಿಸಿವೆ ಎಂದು ಆರೋಪಿಸಿರುವ ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗಾನಂದ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಯಾಗಿರುವ ಮಜ್ದೂರ್ ಸಂಘ (ಬಿಎಂಎಸ್)ದ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಕಾರ್ಮಿಕರ ಬಹುತೇಕ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದೆ. ಆದರೂ ಅನಗತ್ಯ ಮುಷ್ಕರಕ್ಕೆ ಕರೆ ನೀಡುವ ಮೂಲಕ ಕೆಲವು ಕಾರ್ಮಿಕ ಸಂಘಟನೆಗಳ ಮುಖಂಡರುಗಳು ಅಮಾಯಕ ಕಾರ್ಮಿಕರನ್ನು ದಿಕ್ಕು ತಪ್ಪಿಸಿ ಗೊಂದಲ ಮೂಡಿಸುತ್ತಿವೆ ಎಂದು ಆರೋಪಿಸಿದ್ದಾರೆ. ದುಡಿಯುವ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಬಿಎಂಎಸ್ ಸಂಘಟನೆಯ ಮುಖಂಡರುಗಳು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಪರಿಶೀಲನಾ ಸಮಿತಿಯ ವರದಿ ಬಂದ ನಂತರ ಉಳಿದಿರುವ ಒಂದೆರಡು ಸಮಸ್ಯೆಗಳ ಬಗ್ಗೆ ಪರಿಹಾರ ಸೂಚಿಸುವದಾಗಿ ಭರವಸೆ ನೀಡಲಾಗಿದೆ. ಆದರೂ ಸೆ. 2ರ ಮುಷ್ಕರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆಸುತ್ತಿರುವ ವ್ಯವಸ್ಥಿತ ಸಂಚಾಗಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ನೀಡದೆ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಲು ಕೈ ಜೋಡಿಸುವಂತೆ ಸೂದನ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಯೋಗಾನಂದ ಕರೆ ನೀಡಿದ್ದಾರೆ.