ಶ್ರೀಮಂಗಲ, ಆ. 9: ಇಲ್ಲಿಗೆ ಸಮೀಪದ ಕುಮುಟೂರು ಕೊಡವ ರಿಕ್ರಿಯೇಷನ್ ಕ್ಲಬ್ನ ಆಶ್ರಯದಲ್ಲಿ ಕಾಕೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಕೋಟ್ರಂಗಡ ಸುಬ್ರಮಣಿ ಹಾಗೂ ಕೋಟ್ರಂಗಡ ಮನು ಸೋಮಯ್ಯರವರ ಗದ್ದೆಯಲ್ಲಿ ನಡೆದ ಪ್ರಥಮ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮಿಂದೆದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ ಈಗಿನ ಮಕ್ಕಳಿಗೆ ಗದ್ದೆಯ ಕೆಲಸ, ಭತ್ತದ ಕೃಷಿಯ ಬಗ್ಗೆ ಯಾವದೇ ಮಾಹಿತಿ ಇಲ್ಲ. ಕೆಸರು ಗದ್ದೆ ಕ್ರೀಡಾಕೂಟದ ನೆಪದಲ್ಲಾದರು ಮಕ್ಕಳು ಭತ್ತದ ಗದ್ದೆಗೆ ಇಳಿದು ಅದರ ಸುಖವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಕ್ಲಬ್ನ ಚಟುವಟಿಕೆ ಪ್ರಶಂಸನೀಯ. ವಿದ್ಯಾರ್ಥಿಗಳು ಮಣ್ಣಿನೊಂದಿಗೆ ಸದಾ ಸಂಪರ್ಕ ಹೊಂದಿರಬೇಕು ಎಂದರು.
ಮುಖ್ಯ ಅತಿಥಿ ತಾ.ಪಂ ಸದಸ್ಯ ಪೊಯಿಲೇಂಗಡ ಪಲ್ವಿನ್ ಪೂಣಚ್ಚ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಕ್ರೀಡೆಯಲ್ಲಿ ಗೆಲುವು ಸಾದಿಸಬಹುದು. ಜೀವನದ ಗೆಲುವಿಗೆ ಕ್ರೀಡೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಆಸಕ್ತಿಯಿಂದ ಪಾಲ್ಗೊಂಡಿರುವದು ಉತ್ತಮ ಬೆಳವಣಿಗೆ ಎಂದರು.
ಶ್ರೀಮಂಗಲ ಗ್ರಾ.ಪಂ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ ಮಾತನಾಡಿ, ಕ್ರೀಡಾಕೂಟವು ಪ್ರತಿವರ್ಷ ನಡೆದು ಕ್ರೀಡಾರ್ಥಿಗಳಿಗೆ ಪ್ರೋತ್ಸಾಹ ನೀಡುವದರೊಂದಿಗೆ ನಾಡಿನ ಜನರಿಗೆ ಮಳೆಗಾಲದಲ್ಲಿ ಗದ್ದೆ ಕೆಲಸದ ನಡುವೆ ಒಂದಷ್ಟು ಮನರಂಜನೆ ನೀಡುವಂತಾಗಲಿ ಎಂದರು.
ಕೊಡವ ರಿಕ್ರಿಯೇಷನ್ ಕ್ಲಬ್ನ ಅಧ್ಯಕ್ಷ ಕೋಟ್ರಂಗಡ ಅರುಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮಾಜ ಸೇವಕ ಕೋಟ್ರಂಗಡ ಸುಬ್ರಮಣಿ, ಶಿಕ್ಷಕ ಕೋಟ್ರಂಗಡ ಮನು ಸೋಮಯ್ಯ, ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರಿಗೆ ಮಹಿಳೆ ಹಾಗೂ ಪುರುಷರ ವಿಭಾಗಗಳಲ್ಲಿ ಓಟದ ಸ್ಪರ್ಧೆ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಫರ್ಧೆ ಏರ್ಪಡಿಸಿ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.