ಶನಿವಾರಸಂತೆ, ಜು. 3: ‘ಪಟ್ಟಣದ ಸಂತೆಮಾಳ ಮಳೆಯಿಂದಾಗಿ ಕೆಸರುಮಯವಾಗಿದೆ. ಚರಂಡಿ ವ್ಯವಸ್ಥೆಯೇ ಇಲ್ಲಿಲ್ಲ. ಮಳಿಗೆಗಳ ಶೀಟು ಒಡೆದು ಹೋಗಿದೆ. ಹಸಿರು ಮೆಣಸಿನಕಾಯಿ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಯಾವ ಅನುಕೂಲವೂ ಇಲ್ಲ. ಗಾಳಿ, ಮಳೆಗೆ ವ್ಯಾಪಾರ ಮಾಡುವದೇ ಕಷ್ಟವಾಗಿದೆ. ಪಂಚಾಯಿತಿ ಅಧ್ಯಕ್ಷರಾಗಲೀ, ಸದಸ್ಯರಾಗಲಿ ಸಂತೆಮಾಳದ ಕಡೆ ತಿರುಗಿಯೂ ನೋಡಿಲ್ಲ. ಚುನಾವಣೆ ಬಂದಾಗ ಓಟು ಕೇಳೋಕೆ ಮಾತ್ರ ಬರ್ತಾರೆ’.

ಇವು ರೈತರಾದ ಎಂ.ವಿ. ಅರುಣ್, ಪರಮೇಶ್, ಪುಟ್ಟೇಗೌಡ, ವ್ಯಾಪಾರಿಗಳಾದ ಫಯಾಜ್, ಅಸ್ಲಾಂ, ಆಸಿಫ್, ಶರತ್, ಬಸವರಾಜ್, ಅನಿಲ್ ಅವರ ಆಕ್ಷೇಪದ ಮಾತುಗಳು.

ಹಸಿರು ಮೆಣಸಿನಕಾಯಿ ಸಂತೆ ಮುಕ್ತಾಯ ಹಂತ ತಲುಪಿದ್ದು, ರೈತರು ತಂದ ಹಸಿರು ಮೆಣಸಿನಕಾಯಿ ಖರೀದಿಸಲು ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವ್ಯಾಪಾರಿಗಳು, ರೈತರು ವಾಹನಗಳಲ್ಲಿ ಕುಳಿತೇ ವ್ಯಾಪಾರ ಆರಂಭಿಸಿದ್ದರು. ಅನುಕೂಲಕರ ಕೆಲ ಮಳಿಗೆಗಳನ್ನು ಬೇರೆ ವ್ಯಾಪಾರಕ್ಕೆ ಕೊಟ್ಟಿದ್ದ ಕಾರಣ ಇದ್ದ ಒಂದು ಹಾಲ್‍ನಲ್ಲೇ ರೈತರು, ವ್ಯಾಪಾರಿಗಳು ಕಿತ್ತಾಡುತ್ತಾ ವ್ಯಾಪಾರ ಮಾಡಬೇಕಾಯಿತು.

ಮೊದಲೇ ಹಸಿರು ಮೆಣಸಿನಕಾಯಿ ಸಂತೆ ಕೊನೆ ವಾರದ ಸಂತೆಯಾಗಿತ್ತು. ಜೊತೆಗೆ ಬೆಲೆಯೂ ಕಡಿಮೆಯಾಗಿ ರೈತರು ಹತಾಶರಾಗಿದ್ದರು.

ಸಂತೆಯಲ್ಲಿ ಉಲ್ಕಾ ಮೆಣಸಿನಕಾಯಿಗೆ 30 ಕೆಜಿ ಚೀಲಕ್ಕೆ ರೂ. 300 ದರ ದೊರೆಯಿತು. ಪ್ರಿಯಾಂಕ ಜಿ. 4, ಗುಂಟೂರು ಮತ್ತಿತರ ಮೆಣಸಿನ ಕಾಯಿಗೆ 30 ಕೆ.ಜಿ ಚೀಲಕ್ಕೆ ರೂ. 200-260 ರವರೆಗೆ ದರ ದೊರೆಯಿತು.

ಸಂತೆಯಲ್ಲಿ 2 ವಾರಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮಳೆಗೆ ಕಾಯಿ ಸಹಿತ ಗಿಡಕ್ಕೆ ಕರಗಲು, ಕೊಳೆರೋಗ ತಗುಲಿದೆ. ಬೆಳೆಯೂ ಕರಗಿ ಹೋಗುತ್ತಿದೆ, ದರವೂ ಕುಸಿದಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಕೊಡ್ಲಿಪೇಟೆಯ ಕೃಷಿಕ ಉಮೇಶ್ ಹಾಗೂ ಮಾದ್ರೆ ಗ್ರಾಮದ ಎಂ.ವಿ. ಅರುಣ್.