ಭಾಗಮಂಡಲ, ಜ. 21: ಕಡವೆಯೊಂದನ್ನು ಕೆನ್ನಾಯಿಗಳು ಬೇಟೆಯಾಡಿ ಬಲಿ ತೆಗೆದುಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಕರಿಕೆ ರಸ್ತೆಯ ವನ್ಯಜೀವಿ ಅರಣ್ಯದಲ್ಲಿ ಸಂಭವಿಸಿದೆ.ಕರಿಕೆ ರಸ್ತೆಯ ತಣ್ಣಿಮಾನಿ ಗ್ರಾಮದ ಹಕ್ಕಿಕಂಡಿ ಎಂಬಲ್ಲಿ ನಿನ್ನೆ ರಾತ್ರಿ ಕಡವೆಯೊಂದನ್ನು ಕೆನ್ನಾಯಿಗಳು ಬೇಟೆಯಾಡಿದೆ.

ಮುಖ್ಯ ರಸ್ತೆ ಬದಿಯಲ್ಲೇ ಕಡವೆಯನ್ನು ಅರ್ಧಂಬರ್ಧ ತಿಂದು ಬಿಟ್ಟು ಹೋಗಿದೆ. ಇಂದು ಬೆಳಿಗ್ಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಡವೆಯ ದೇಹವನ್ನು ಬೀದಿನಾಯಿಗಳು ಕಿತ್ತು ತಿನ್ನುತಿದ್ದುದನ್ನು ಕಂಡ ದಾರಿ ಹೋಕರು ಮಾರ್ಗ ಮಧ್ಯೆ ಇರುವ ಅರಣ್ಯ ಕಚೇರಿ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ನಂತರ ಅವರುಗಳು ಬಂದು ಅಳಿದುಳಿದ ಕಳೇಬರಹವನ್ನು ಸುಟ್ಟು ಹಾಕಿದ್ದಾರೆ.

ಸಣ್ಣಪುಟ್ಟ ಬೇಟೆ, ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಮನೆಗಳಿಗೆ ಧಾಳಿ ಮಾಡುವ ಅರಣ್ಯ ಇಲಾಖೆಯವರಿಗೆ ಅಷ್ಟೊಂದು ದೊಡ್ಡ ಕಡವೆ ರಸ್ತೆ ಬದಿ ಸತ್ತು ಬಿದ್ದಿರುವದು ತಿಳಿಯದೇ ಇರುವದು ಸೋಜಿಗ ವಾಗಿದೆ. ನಿನ್ನೆ ರಾತ್ರಿಯಿಡಿ ಹುಲ್ಲು ಸಾಗಾಟ ಲಾರಿಗಳ ಬೇಟೆಯಲ್ಲಿದ್ದ ಸಿಬ್ಬಂದಿಗಳಿಗೆ ಕಡವೆ ಬೇಟೆ ವಿಚಾರ ಗೊತ್ತಾಗಲೇ ಇಲ್ಲವೆಂದು ಗ್ರಾಮಸ್ಥರು ಆಡಿಕೊಂಡಿದ್ದಾರೆ. - ಸುನಿಲ್